ದಿನಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಲಿದೆ: ಕುಮಾರಸ್ವಾಮಿ ಎಚ್ಚರಿಕೆ

Update: 2020-04-10 16:50 GMT

ಬೆಂಗಳೂರು, ಎ. 10: ರಾಜ್ಯದಲ್ಲಿ ರೇಶ್ಮೆ ಮಾರುಕಟ್ಟೆ ತೆರೆಯದ ಹಿನ್ನೆಲೆಯಲ್ಲಿ ದಿನಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಶುಕ್ರವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಲಾಕ್‍ಡೌನ್ ವಿಸ್ತರಣೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ರೇಶ್ಮೆ ಖರೀದಿಗೆ ಹೆಚ್ಚುವರಿ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೆ, ಸೂಕ್ತ ಪೂರ್ವ ಸಿದ್ಧತೆಗಳಿಲ್ಲದ ಕಾರಣಕ್ಕೆ ತೆರೆದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ನಮ್ಮ ಸ್ನೇಹಿತರೊಬ್ಬರು ತಮ್ಮ ಕಲ್ಯಾಣ ಮಂಟಪ ಬಿಟ್ಟುಕೊಡಲು ಸಿದ್ಧರಿದ್ದರು. ಅಧಿಕಾರಿಗಳ ಜತೆ ಚರ್ಚಿಸಿ  ರೈತರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆಂದು ತಿಳಿಸಿದರು.

ರಾಜ್ಯದಲ್ಲಿನ ರೈತರ ಸಂಕಷ್ಟವನ್ನು ನೋಡಿದ್ದೇನೆ. ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿಯೂ ಸೂಕ್ತ ಸಲಹೆ ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗೆ ಮೂರು ಬಾರಿ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದ್ದೇನೆ. ರೈತರ ಬೆಳೆ ಹಾಳಾಗುತ್ತಿದ್ದು, ಸರಕಾರ ತಾತ್ಕಾಲಿಕ ಪರಿಹಾರವೂ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇನ್ನೂ ಒಂದೆರಡು ತಿಂಗಳು ಕಳೆದರೆ ಅತ್ಯಂತ ಕೆಟ್ಟ ಪರಿಸ್ಥಿತಿಗೆ ದೂಡಲಿದ್ದು, ತರಕಾರಿ ಮಾರಾಟ ವ್ಯವಸ್ಥೆ ಇಲ್ಲ. ಹೀಗಾಗಿ ರೈತರು ತರಕಾರಿ ಬೆಳೆಯುವುದು ಅಸಾಧ್ಯವಾಗಲಿದೆ. ಇದರಿಂದ ಭವಿಷ್ಯದಲ್ಲಿ ತರಕಾರಿ ಬೆಳೆಯಲು ತೊಂದರೆಗಳಾಗುವ ವಾತಾವರಣವಿದೆ. ಸರಕಾರ ಈ ಬಗ್ಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಅನ್ನು ಎ.14ರ ಬಳಿಕ ವಿಸ್ತರಣೆ ಸಂಬಂಧ ಏನು ತೀರ್ಮಾನ ಕೈಗೊಳ್ಳವರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ 16 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸಲಿದ್ದಾರೆಂದು ಹೇಳಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಿದ್ದಾರೆಂಬ ಮಾಹಿತಿ ಇದೆ. ಸಂಕಷ್ಟದ ಸಂದರ್ಭದಲ್ಲಿ ಟೀಕೆ ಮಾಡುವುದು ಸರಿಯಲ್ಲ. ಇದು ಸರಕಾರ ಸರಿಯಾಗಿ ಕೆಲಸ ಮಾಡಲು ಸಲಹೆ ನೀಡುವ ಸಮಯ. ಯಾವ ರೀತಿ ಕ್ರಮ ಕೈಗೊಳ್ಳುವರು ನೋಡೋಣ ಎಂದ ಅವರು, ರಾಮನಗರದಲ್ಲಿ ರೇಶ್ಮೆ ಮಾರುಕಟ್ಟೆ ಕುರಿ ಸಂತೆಯಾಗಿದೆ. ವೈದ್ಯಕೀಯ ಇಲಾಖೆಗೆ ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಹೇಳಿದ್ದೇನೆ. ಪಿಪಿಇ ಕಿಟ್‍ಗಳನ್ನು ತಕ್ಷಣ ತರಬೇಕು. ಇದು ಕೇವಲ ಹೇಳಿಕೆಗೆ ಸೀಮಿತವಾಗಬಾರದು ಎಂದು ಹೇಳಿದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಜಮೀನಿನಲ್ಲೆ ಖರೀದಿಸುವ ವ್ಯವಸ್ಥೆ ಜಾರಿಗೆ ತರಬೇಕು. ಈ ಸಂದರ್ಭದಲ್ಲಿ ರಫ್ತು ಮಾಡುವುದು ಕ್ಲಿಷ್ಟಕರ. ರೈತರ ಬೆಳೆ ನಷ್ಟವಾಗಿದ್ದು, ಎಕರೆಗೆ 10ರಿಂದ 20 ಸಾವಿರ ರೂ.ಪರಿಹಾರ ನೀಡಬೇಕು. ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದರು.

ಇವತ್ತು ಒಬ್ಬ ರೈತ ಉತ್ತರ ಕರ್ನಾಟಕದಲ್ಲಿ ಸಾವನ್ನಪ್ಪಿದ್ದು, ಪ್ರತಿದಿನ ರೈತ ಆತ್ಮಹತ್ಯೆಗೆ ಶರಣಾಗುವ ಕಾಲ ಆರಂಭವಾಗಿದೆ. ಆದುದರಿಂದ ರಾಜ್ಯ ಸರಕಾರ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕು.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News