ಔಷಧಿ ಸಿಗದೆ ಮಹಿಳೆ ಪರದಾಟ: ಟಿಕ್ ಟಾಕ್ ವಿಡಿಯೋ ನೋಡಿ ಸಹಾಯಹಸ್ತ ಚಾಚಿದ ಸಿಎಂ ಬಿಎಸ್‌ವೈ

Update: 2020-04-11 12:38 GMT

ಬೆಂಗಳೂರು, ಎ.11: ಕಿಡ್ನಿ ವೈಫಲ್ಯದಿಂದ ಸೂಕ್ತ ಔಷಧಿ ಸಿಗದೆ ನರಳುತ್ತಿದ್ದ ಮಹಿಳೆಯ ನೆರವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಧಾವಿಸಿದ್ದು, ಟಿಕ್ ಟಾಕ್ ವಿಡಿಯೋ ಮೂಲಕ ಮಾಡಿದ್ದ ಮನವಿಗೆ ಸ್ಪಂದಿಸಿ ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡಿದ್ದಾರೆ.

ಬೆಳಗಾವಿಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿಯು ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

ಈ ಸಂದರ್ಭ 'ಟಿಕ್ ಟಾಕ್' ಶೇಖವ್ವ ಅವರ ನೆರವಿಗೆ ಬಂದಿದ್ದು, ಶೇಖವ್ವ ಮಗಳು ಪವಿತ್ರ ಟಿಕ್ ಟಾಕ್‍ನಲ್ಲಿ ತನ್ನ ತಾಯಿಯ ಪರಿಸ್ಥಿತಿ ಬಗ್ಗೆ ಟಿಕ್ ಟಾಕ್ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಳು. ಈ ವಿಡಿಯೋ ನೋಡಿ ತಕ್ಷಣ ಸಿಎಂ ಪ್ರತಿಕ್ರಿಯಿಸಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News