×
Ad

ನೈರುತ್ಯ ರೈಲ್ವೆಯಿಂದ 312 ಐಸೋಲೇಷನ್ ಬೋಗಿಗಳ ನಿರ್ಮಾಣ: ಕೇಂದ್ರ ಸಚಿವ ಸುರೇಶ್ ಅಂಗಡಿ

Update: 2020-04-11 18:50 IST

ಹುಬ್ಬಳ್ಳಿ, ಎ.11: ರೈಲ್ವೆ ಇಲಾಖೆಯು 10 ದಿನಗಳಲ್ಲಿ 80 ಸಾವಿರ ಹಾಸಿಗೆಗಳ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವತಿಯಿಂದ 312 ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಹುಬ್ಬಳ್ಳಿಯ ರೈಲ್ವೆ ವರ್ಕ್‍ಶಾಪ್‍ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ದೇಶಾದ್ಯಂತ 20 ಸಾವಿರ ಐಸೋಲೇಶನ್ ಬೋಗಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 5 ಸಾವಿರ ಸ್ಲೀಪರ್ ಬೋಗಿಗಳನ್ನು ಐಸೋಲೇಷನ್ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.

ಒಟ್ಟು 3.20 ಲಕ್ಷ ಐಸೋಲೇಷನ್ ಬೆಡ್‍ಗಳನ್ನು ರೈಲ್ವೆ ಇಲಾಖೆಯಿಂದ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗ ನಿರ್ಮಿಸಿರುವ ಐಸೋಲೇಷನ್ ಬೋಗಿಗಳನ್ನು ಆರೋಗ್ಯ ಇಲಾಖೆ ಹಾಗು ಗೃಹ ಇಲಾಖೆ ನಿರ್ದೇಶನದ ಮೇರೆಗೆ, ಅಗತ್ಯ ಇರುವ ಕಡೆ ಸೇವೆಗಾಗಿ ಕಳುಹಿಸಿಕೊಡಲಾಗುವುದು. ಕೊರೋನ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಐಸೋಲೇಷನ್ ಬೋಗಿಗಳಲ್ಲಿ ಇರಿಸಿ ಚಿಕಿತ್ಸೆ ನೀಡಬಹುದಾಗಿದೆ ಎಂದು ಸುರೇಶ್ ಅಂಗಡಿ ತಿಳಿಸಿದರು.

ನೈರುತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗ ಹಾಗೂ ವರ್ಕ್ ಶಾಪ್‍ಗಳಲ್ಲಿ 312 ಐಸೋಲೇಷನ್ ಬೋಗಿಗಳನ್ನು ನಿರ್ಮಿಸಲಾಗಿದೆ. ಇಲಾಖೆಯು ಕೊರೋನದಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಎಲ್ಲ ಪ್ರಯಾಣಿಕರ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಸಲುವಾಗಿ ಸರಕು ಸಾಗಾಣಿಕೆ ರೈಲುಗಳ ಸಂಚಾರ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ನೈರುತ್ಯ ರೈಲ್ವೆ ಮುಖ್ಯ ವ್ಯವಸ್ಥಾಪಕ ಅಜಯ್‍ ಕುಮಾರ್ ಸಿಂಗ್, ಹೆಚ್ಚುವರಿ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಮಿಶ್ರಾ, ಹುಬ್ಬಳ್ಳಿಯ ಸಿ.ಡಬ್ಲ್ಯೂ.ಎಂ.ನೀರಜ್ ಜೈನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News