×
Ad

ಚಿಕ್ಕಮಗಳೂರು: ಸರಕು ವಾಹನದಲ್ಲಿ ಅವಿತುಕೊಂಡಿದ್ದ 22 ಕಾರ್ಮಿಕರು ಪೊಲೀಸ್ ವಶಕ್ಕೆ

Update: 2020-04-11 22:33 IST

ಚಿಕ್ಕಮಗಳೂರು, ಎ.11: ಹಾಸನದ ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಸೋಮನಹಳ್ಳಿಯ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಗರಿಬೊಮ್ಮನಹಳ್ಳಿಯ 22 ವಲಸೆ ಕಾರ್ಮಿಕರಿಗೆ ಕೆಲಸ, ಆಶ್ರಯ ನೀಡದೆ ಎಸ್ಟೇಟ್ ಮಾಲಕರು ಹೊರಹಾಕಿದ ಘಟನೆ ನಡೆದಿದ್ದು, ಬಳಿಕ ಕೂಲಿ ಅರಸಿಕೊಂಡು ಬಂದ ಅವರನ್ನು ಹಿರೇಮಗಳೂರು ಚೆಕ್‌ಪೋಸ್ಟ್ ನಲ್ಲಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಕೂಲಿ ಕಾರ್ಮಿಕರು ಲಾಕ್‌ಡೌನ್ ಆದ ಬಳಿಕ ಅನ್ನ, ನೀರು ಇಲ್ಲದೆ ಪರದಾಡಿದ್ದರೆಂದು ತಿಳಿದುಬಂದಿದ್ದು, ಉಳಿದುಕೊಳ್ಳಲು ವ್ಯವಸ್ಥೆಯೂ ಇಲ್ಲದ ಪರಿಣಾಮ ಜಿಲ್ಲೆಯ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡಲು ಶುಕ್ರವಾರ ರಾತ್ರಿ ಸರಕು ಸಾಗಣೆ ವಾಹನದಲ್ಲಿ ಬಂದಿದ್ದು, ಚಿಕ್ಕಮಗಳೂರು ನಗರದ ಹಿರೇಮಗಳೂರು ಚೆಕ್‌ಪೋಸ್ಟ್‌ನ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.

ಮೂರು ದಿನದ ಹಸುಗೂಸು, ಓರ್ವ ಬಾಣಂತಿ, 6 ಮಕ್ಕಳು ಸೇರಿದಂತೆ 22 ಜನರು ಗೂಡ್ಸ್‌ನಲ್ಲಿ ನಗರಕ್ಕೆ ಆಗಮಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬೀಳಬಾರದು ಎಂದು ಗೋಣಿ ಚೀಲಗಳಲ್ಲಿ ಅವಿತುಕೊಂಡು ಚಿಕ್ಕಮಗಳೂರು ಜಿಲ್ಲೆಯತ್ತ ಕೂಲಿ ಅರಸಿಕೊಂಡು ಬಂದಿದ್ದರು. ಆದರೆ ಶುಕ್ರವಾರ ರಾತ್ರಿ ನಗರದ ಹೊರ ವಲಯದಲ್ಲಿರುವ ಹಿರೇಮಗಳೂರು ಚೆಕ್‌ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಿದಾಗ ಕಾರ್ಮಿಕರು ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದು ಎಲ್ಲರನ್ನು ನಗರದ ವಿವಿಧ ಹಾಸ್ಟೆಲ್‌ಗಳಲ್ಲಿ ಆರಂಭಿಸಲಾಗಿರುವ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿ ಆಶ್ರಯ ನೀಡಲಾಗಿದೆ ತಿಳಿದು ಬಂದಿದೆ. ಎಸ್ಟೇಟ್ ಮಾಲಕ ಕೆಲ ದಿನಗಳಿಂದ ಕೆಲಸ ಮಾಡಿಸಿಕೊಂಡು ನಂತರ ಎಸ್ಟೇಟ್‌ನಿಂದ ಹೊರ ಕಳುಹಿಸಿದ್ದಾನೆಂದು ಕಾರ್ಮಿಕರು ದೂರಿದ್ದಾರೆ. 

ಇನ್ನು ಚಿಕ್ಕಮಗಳೂರಿನಲ್ಲೂ ವಲಸೆ ಕಾರ್ಮಿಕರು ತೊಂದರೆಗೆ ಸಿಲುಕಿದ್ದು, ನಗರ ಸಮೀಪದ ಗೌಡನ ಹಳ್ಳಿಯಲ್ಲಿರುವ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಿದ್ದ ಅಸ್ಸಾಂ ಮೂಲದ 30 ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿ ಬಂಧಿಯಾಗಿದ್ದಾರೆ. ಕೆಲಸವಿಲ್ಲದ ಕಾರ್ಮಿಕರಿಗೆ ಕಾರ್ಖಾನೆ ಮಾಲಕರು ಯಾವುದೇ ನೆರವು ನೀಡುತ್ತಿಲ್ಲ. ಕಾರ್ಮಿಕರಿಗೆ ಆಹಾರಕ್ಕೂ ಗತಿ ಇಲ್ಲ. ಊರಿಗೂ ಹಿಂದಿರುಗಲಾಗುತ್ತಿಲ್ಲ. ಮಾಲಕರನ್ನು ವಿಚಾರಿಸಿದರೆ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆಯೇ ಹೊರತು ಕಾರ್ಮಿಕರಿಗೆ ಅಗತ್ಯ ವಸ್ತುಗಳು ಸೇರಿದಂತೆ ಯಾವ ನೆರವನ್ನೂ ನೀಡುತ್ತಿಲ್ಲ. ಜಿಲ್ಲಾಧಿಕಾರಿ, ನಗರಸಭೆ ಹಾಗೂ ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ನೆರವಾಗಬೇಕು ಎಂದು ಕಾರ್ಖಾನೆಗೆ ಕಾರ್ಮಿಕರನ್ನು ಕರೆ ತಂದಿರುವ ಜಯದೇವ್ ಮನವಿ ಮಾಡಿದ್ದಾರೆ.

ಎಸ್ಟೇಟ್‌ನಲ್ಲಿ ಕೆಲಸ ನೀಡದೆ ವಲಸೆ ಕಾರ್ಮಿಕರನ್ನು ಹೊರ ಹಾಕಿದ ಆರೋಪದ ಮೇರೆಗೆ ಬೇಲೂರು ತಾಲೂಕಿನ ಸೋಮನಹಳ್ಳಿಯಲ್ಲಿ ಎಸ್ಟೇಟ್ ಮಾಲಕನನ್ನು ಬಂಧಿಸಲಾಗಿದೆ. ಕಾರ್ಮಿಕರನ್ನು ಅಕ್ರಮವಾಗಿ ಜಿಲ್ಲೆಯಲ್ಲಿ ಸಾಗಣೆ ಮಾಡಲು ಯತ್ನಿಸಿದ ಚಾಲಕನನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ನಗರದ ವಿವಿಧ ಹಾಸ್ಟೆಲ್‌ಗಳಲ್ಲಿ ಆಶ್ರಯ ನೀಡಲಾಗಿದೆ.

-ಹರೀಶ್ ಪಾಂಡೆ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News