×
Ad

ಕೊರೋನ: ಶಾಲಾ ಸೌಲಭ್ಯ ಯೋಜನೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ

Update: 2020-04-11 23:18 IST

ಬೆಂಗಳೂರು, ಎ.11: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಮಕ್ಕಳ ಸೌಲಭ್ಯದ ಯೋಜನೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ಯೋಜನೆಗಳಿಗೆ ಅನುದಾನ ಕಡಿತವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಸರಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಸರಕಾರದಿಂದ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಹಾಲು ಹಾಗೂ ಸೈಕಲ್ ಸಹಿತವಾಗಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇಷ್ಟೇ ಅಲ್ಲದೆ, ಆರ್‍ಟಿಇ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಆರು ಲಕ್ಷ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿಯನ್ನು ಸರಕಾರ ಮಾಡುತ್ತಿದೆ.

ಕೇಂದ್ರ ಸರಕಾರದಿಂದ ಕೆಲವೊಂದು ಯೋಜನೆಗೆ ಅನುದಾನ ಬರುತ್ತಿತ್ತು. ಇನ್ನು ಕೆಲವು ಯೋಜನೆಗೆ ರಾಜ್ಯ ಸರಕಾರವೇ ಅನುದಾನ ಭರಿಸುತ್ತಿತ್ತು. ಮತ್ತೆ ಕೆಲವು ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.

2019-20 ನೇ ಸಾಲಿನಲ್ಲಿ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ವಿತರಣೆ ಮಾಡಿಲ್ಲ. ಆ ಅನುದಾನವನ್ನೇ ಮುಂದಿನ ವರ್ಷದ ಸಮವಸ್ತ್ರ ವಿತರಿಸುವಾಗ ಬಳಸಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ಸೂಚಿಸಲಾಗಿದೆ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರಕ್ಕೆ ಅನುದಾನ ಬಿಡುಗಡೆ ಮಾಡುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.

ಸಭೆ ನಡೆದಿಲ್ಲ: ಪ್ರತಿ ವರ್ಷ ಮುಂದಿನ ವರ್ಷದ ವಿವಿಧ ಯೋಜನೆಯ ಅಂಗೀಕಾರ ಹಾಗೂ ಅನುದಾನ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಎಲ್ಲ ರಾಜ್ಯಗಳ ಸಮಗ್ರ ಶಿಕ್ಷಣ ಅಥವಾ ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುತ್ತಿದೆ. 2020-21 ರ ಕಾರ್ಯಕ್ರಮ ಅಂಗೀಕಾರ ಮತ್ತು ಅನುದಾನ ಹಂಚಿಕೆ ಸಂಬಂಧಿಸಿದಂತೆ ಈವರೆಗೂ ಸಭೆ ನಡೆದಿಲ್ಲ.

ಕೋಟ್ಯಂತರ ಹಣ ಅಗತ್ಯವಿದೆ: ಶಿಕ್ಷಣ ಇಲಾಖೆಯ ವಿವಿಧ ಯೋಜನೆಗೆ ಕೇಂದ್ರ ಸರಕಾರದಿಂದ ಪ್ರತಿವರ್ಷದ ಬಜೆಟ್ ಘೋಷಣೆ ಪ್ರಕಾರವಾಗಿ ಸಾವಿರಾರು ಕೋಟಿ ರೂ. ಯೋಜನೆಯ ಅನುಸಾರ ಬರುತ್ತಿತ್ತು. ಒಂದೆರಡು ವರ್ಷದಲ್ಲಿ ಈ ಅನುದಾನದ ಪ್ರಮಾಣವೂ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News