ಕಟ್ಟಡ ಕಾರ್ಮಿಕರಿಗೆ ಇನ್ನೂ ಜಮೆ ಆಗದ ಕೋವಿಡ್ ಪರಿಹಾರ: ಆರೋಪ

Update: 2020-04-11 17:56 GMT

ಬಳ್ಳಾರಿ, ಎ.11: ಲಾಕ್‍ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಸರಕಾರವು ಕೋವಿಡ್ ಪರಿಹಾರ ಘೋಷಿಸಿ ಹಲವು ದಿನಗಳೇ ಕಳೆದರೂ ಇದುವರೆಗೆ ಅವರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯ ಹಾಗೂ ಕೇಂದ್ರ ಸರಕಾರ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ 1 ಸಾವಿರ ರೂ. ನೇರವಾಗಿ ಅವರ ಖಾತೆಗೆ ಜಮೆ ಮಾಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಆ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಉದ್ಯೋಗ ಖಾತ್ರಿ ಸೇರಿ ಇತರೆ ಕೆಲಸಗಳು ನಿಂತು ಹೋಗಿರುವುದರಿಂದ ಅವರು ಮನೆಯಲ್ಲಿ ಕೂರುವಂತಾಗಿದೆ. ಇನ್ನೊಂದೆಡೆ ಪರಿಹಾರದ ಹಣ ಸೇರದ ಕಾರಣ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಕಟ್ಟಡ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳಿಗೆ ಸಾಕಾಗುವಷ್ಟು ಪಡಿತರ ವಿತರಿಸಬೇಕೆಂದು ಸರಕಾರ ಸೂಚಿಸಿದೆ. ಹೀಗಿದ್ದರೂ ಕಟ್ಟಡ ಕಾರ್ಮಿಕರಿಗೆ ಅದು ತಲುಪಿಲ್ಲ. ಪಡಿತರ ವಿತರಣೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಬಹುತೇಕ ಕಟ್ಟಡ ಕಾರ್ಮಿಕರಿಗೆ ಸಿಕ್ಕಿಲ್ಲ. ಅರ್ಹರಿಗೆ ಸಿಗಬೇಕಾದದ್ದು ಏಕೆ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಎನ್.ಯಲ್ಲಾಲಿಂಗ ಪ್ರಶ್ನಿಸಿದ್ದಾರೆ.

ಪಡಿತರ ವಿತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ಪಡಿತರ ಒಟ್ಟಿಗೆ ಕೊಡುತ್ತಿರುವುದರಿಂದ ಕೆಲವೆಡೆ ಸಮಸ್ಯೆ ಆಗುತ್ತಿರಬಹುದು. ಎಲ್ಲೆಡೆ ಲಾಕ್‍ಡೌನ್ ಇರುವುದರಿಂದ ನಮಗೂ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕಿಗೆ ಹೋದರೆ ಸರಕಾರದಿಂದ ಹಣ ಜಮೆ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತದೆ. ಆದರೆ, ಹೋಗಲು ಆಗಿಲ್ಲ ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಅಲ್ತಾಫ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News