×
Ad

ನಿರ್ದಿಷ್ಟ ಸಮುದಾಯವನ್ನು ಕೊಳೆತ ಸೇಬುಗಳು ಎಂದ ಸಂಪಾದಕೀಯ: ಕ್ಷಮೆಯಾಚಿಸಿದ ಸ್ಟಾರ್ ಆಫ್ ಮೈಸೂರ್ ಪತ್ರಿಕೆ

Update: 2020-04-12 12:15 IST

ಮಂಗಳೂರು, ಎ.12 : ತನ್ನ ಸಂಪಾದಕೀಯದಲ್ಲಿ ನಿರ್ದಿಷ್ಟ ಸಮುದಾಯವನ್ನು " ಬುಟ್ಟಿಯಲ್ಲಿರುವ  ಕೊಳೆತ ಸೇಬುಗಳಿಗೆ " ಹೋಲಿಸಿ ಅವುಗಳನ್ನು "ನಿವಾರಿಸಬೇಕಾದ ಅನಿವಾರ್ಯತೆ" ಅರ್ಥದ ಮಾತುಗಳನ್ನು ಬರೆದಿದ್ದ ಮೈಸೂರಿನ ಸ್ಟಾರ್ ಆಫ್ ಮೈಸೂರ್ ಸಂಜೆ ದೈನಿಕ ಎಪ್ರಿಲ್ 10 ರಂದು ತನ್ನ ಮುಖಪುಟದಲ್ಲಿ ಕ್ಷಮೆಯಾಚಿಸಿದೆ. 

ಎಪ್ರಿಲ್ 6 ರಂದು "Bad apples in the basket" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಸಂಪಾದಕೀಯದಲ್ಲಿ ಈ ತೀರಾ ಆಕ್ಷೇಪಾರ್ಹ ವಿಷಯಗಳಿದ್ದವು ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.  ನಿರ್ದಿಷ್ಟ ಸಮುದಾಯದ ವೇಷಭೂಷಣ, ಶೇಕಡಾ ಜನಸಂಖ್ಯೆ ಇತ್ಯಾದಿಗಳ ಉಲ್ಲೇಖಿಸಿದ ಸಂಪಾದಕೀಯ  "ಈ ಕೊಳೆತ ಸೇಬುಗಳು ಉಳಿದ ಒಳ್ಳೆಯ ಸೇಬುಗಳನ್ನು ಹಾಳು ಮಾಡಿಬಿಡುತ್ತವೆ. ಹಾಗಾಗಿ ಇದಕ್ಕಿರುವ ಅತ್ಯುತ್ತಮ ಪರಿಹಾರ ಇವುಗಳನ್ನು ಕೆಲವು ದಶಕಗಳ ಹಿಂದೆ ಸಿಂಗಾಪೂರದ ನಾಯಕ ಮಾಡಿದಂತೆ ಅಥವಾ ಈಗ ಇಸ್ರೇಲ್ ಮಾಡುತ್ತಿರುವಂತೆ ನಿವಾರಿಸಿಬಿಡುವುದು" ಎಂದು ಹೇಳಿ ಪರೋಕ್ಷವಾಗಿ ಜನಾಂಗೀಯ ನಿರ್ಮೂಲನೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸಿತ್ತು.  

ಕೆ ಬಿ ಗಣಪತಿ ಸ್ಟಾರ್ ಆಫ್ ಮೈಸೂರ್ ನ ಪ್ರಧಾನ ಸಂಪಾದಕರಾಗಿದ್ದಾರೆ. ಎಂ ಗೋವಿಂದೇ ಗೌಡ ಅವರು ಪತ್ರಿಕೆಯ ಸಂಪಾದಕರು. 

ಸ್ಟಾರ್ ಆಫ್ ಮೈಸೂರ್ ನ ಈ ಸಂಪಾದಕೀಯಕ್ಕೆ ಎಲ್ಲ ವಲಯಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಪ್ರಚೋದನಕಾರಿ ಸಂಪಾದಕೀಯ ಬರೆದ ಸಂಪಾದಕರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು. ಈ ಬಗ್ಗೆ The campaign for ethical media reporting ನ ಸಿದ್ಧಾರ್ಥ್ ಕೆ ಜೆ, ಮಾನವಿ ಅತ್ರಿ ಹಾಗು ಮೈತ್ರೇಯಿ ಕೃಷ್ಣನ್ ಅವರು ಪತ್ರಿಕೆಯ ಸಂಪಾದಕರಿಗೆ ನೋಟಿಸ್ ನೀಡಿ ಕೂಡಲೇ ಈ ಆಕ್ಷೇಪಾರ್ಹ ಸಂಪಾದಕೀಯಕ್ಕಾಗಿ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. 

ರವಿವಾರ ಸ್ಟಾರ್ ಆಫ್ ಮೈಸೂರ್ ತನ್ನ ಮುಖಪುಟದಲ್ಲಿ ಕ್ಷಮೆ ಕೋರಿದೆ. "ನಮ್ಮ ಸಂಪಾದಕೀಯದಲ್ಲಿ ನಮ್ಮಿಂದಾದ ತಪ್ಪಿನಿಂದ ನಮ್ಮ ಮಾನ್ಯ ಓದುಗರ ಮನಸ್ಸಿಗೆ, ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದಕ್ಕಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ" ಎಂದು ಸಂಪಾದಕರು ಈ ಟಿಪ್ಪಣಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News