ಕೊರೋನ ಭೀತಿ: ವೈದ್ಯ ಹುದ್ದೆ ಖಾಲಿಯಿದ್ದರೂ ಕೆಲಸಕ್ಕೆ ಸೇರಲು ಹಿಂದೇಟು !
ಯಾದಗಿರಿ, ಎ.12: ಕೊರೋನ ವೈರಸ್ ನಿಯಂತ್ರಣಕ್ಕಾಗಿ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಸ್ಪತ್ರೆ ಮುಂದಾಗಿತ್ತು ಆದರೆ, ಕೊರೋನ ಭೀತಿ ಹಿನ್ನೆಲೆ ಹುದ್ದೆ ಭರ್ತಿಗೆ ಬರಲು ಹಿಂದೇಟು ಹಾಕಿದ್ದಾರೆ.
ಎ.3ರಂದು ಸಂದರ್ಶನ ಕೂಡ ಗೊತ್ತಾಗಿತ್ತು. ವೈದ್ಯರಿಗೆ ಮಾಸಿಕ 60 ಸಾವಿರ ರೂ., ನರ್ಸ್‍ಗಳಿಗೆ 20 ಸಾವಿರ ರೂ. ಆಫರ್ ನೀಡಲಾಗಿತ್ತು. ಆದರೆ, ಶುಶ್ರೂಷಕರ ಹುದ್ದೆಗೆ 20 ಮಂದಿ ಬಂದಿದ್ದು ಅವರಿಗೆ ತಕ್ಷಣ ನೇಮಕಾತಿ ಆದೇಶ ನೀಡುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಜ್ಞ ವೈದ್ಯರು ಮತ್ತು ವೈದ್ಯರು ಇದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರದ್ದು ಸ್ವಂತ ಕ್ಲಿನಿಕ್‍ಗಳಿವೆ. ಆದರೆ, ಕೊರೋನ ವೈರಸ್ ಸೋಂಕಿತ ರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸಂಕಷ್ಟ ಸಮಯದಲ್ಲಿಯೂ ಸಹ ವೈದ್ಯರು ಸರಕಾರದ ಜತೆ ಕೈ ಜೋಡಿಸದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.
14 ಹುದ್ದೆ ಖಾಲಿ: ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 30 ವೈದ್ಯರು ಇರಬೇಕಿದೆ. ಆದರೆ, ಕೇವಲ 16 ವೈದ್ಯರಿದ್ದಾರೆ. 40 ನರ್ಸ್‍ಗಳು ಬೇಕಿದ್ದು, ಅದರಲ್ಲಿ 25 ಜನ ಇದ್ದಾರೆ. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ಸವಾಲಿನ ಕೆಲಸವಾಗಿದೆ. ಇದನ್ನು ನೀಗಿಸಲು ಮುಂದಾಗಿದ್ದರೂ ಸಹ ಸೇವೆ ನೀಡಲು ವೈದ್ಯರು ಬರದೇ ಇರುವುದು ಕಳವಳಕಾರಿಯಾಗಿದೆ.