ವಿಜಯಪುರದ ಮಹಿಳೆಗೆ ಕೊರೋನ ದೃಢ: ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ
Update: 2020-04-12 18:07 IST
ವಿಜಯಪುರ, ಎ.12: ವಿಜಯಪುರ ಜಿಲ್ಲೆಯಲ್ಲಿ ಲಾಕ್‍ಡೌನ್ ಆಗಿ ಹಲವು ದಿನ ಕಳೆದರೂ ಯಾವುದೇ ಕೊರೋನ ವೈರಸ್ ಕಂಡು ಬಂದಿರಲಿಲ್ಲ. ಆದರೆ, ಎ.12ರಂದು 60 ವರ್ಷದ ವಯಸ್ಸಿನ ಮಹಿಳೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದ್ದು, ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಷನ್‍ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್-19 ದೃಢಪಟ್ಟ ಪ್ರಥಮ ಪ್ರಕರಣ ಇದಾಗಿದೆ. ನೆರೆಯ ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ಸೊಲ್ಲಾಪುರ ಜಿಲ್ಲೆಗಳಲ್ಲಿ ಕೋವಿಡ್-19 ವ್ಯಾಪಿಸಿದ್ದರೂ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣ ಕಂಡು ಬಾರದೇ ಇದ್ದ ಕಾರಣ ಜನರು ನಿರಾಳರಾಗಿದ್ದರು. ಆದರೆ, ಇದೀಗ ಮಾರಕ ರೋಗ ಜಿಲ್ಲೆಗೂ ವ್ಯಾಪ್ತಿಸಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕೋವಿಡ್-19 ದೃಢಪಟ್ಟಿರುವ ಮಹಿಳೆ ವಾಸಿಸುವ ಪ್ರದೇಶದಲ್ಲಿ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದೆ. ಎಲ್ಲ ಮಾರ್ಗಗಳಿಗೂ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಜನರು ಮನೆಯಿಂದ ಹೊರಬಾರದಂತೆ ನಿರ್ಬಂಧ ವಿಧಿಸಿದೆ.