×
Ad

ಹಸಿವು ತಣಿಸುವ ಅನ್ನದಲ್ಲಿಯೂ ರಾಜಕೀಯವೇ ?: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

Update: 2020-04-12 18:54 IST

ಬೆಂಗಳೂರು, ಎ.12: ಬೆಂಗಳೂರಿನಲ್ಲಿ ಕಾರ್ಮಿಕರು ಮತ್ತು ಬಡವರಿಗೆ ಆಹಾರ ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಕರ್ನಾಟಕ ಬಿಜೆಪಿ ರಾಜಕೀಯವಾಗಿ ದುರುಪಯೋಗ ಮಾಡುತ್ತಿದ್ದು, ಪಾರದರ್ಶಕತೆ ಇಲ್ಲದಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಟ್ಟಡ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿಯಾಗಿ ಕೇಂದ್ರ ಕಿಚನ್ ನಿಂದ ತರಿಸಿಕೊಂಡು ತಮಗೆ ಬೇಕಾದವರಿಗೆ ವಿತರಿಸುತ್ತಿದ್ದಾರೆ. ಇದೆಂತಹ ಕ್ಷುಲಕ ರಾಜಕೀಯ !. ಕಾರ್ಮಿಕರು ಮತ್ತು ಬಡವರಿಗೆ ಸರ್ಕಾರ ವಿತರಿಸುವ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಮೇಲೆ ಬಿಜೆಪಿ ಶಾಸಕರು ತಮ್ಮ ಭಾವಚಿತ್ರ-ಹೆಸರಿನ ಲೇಬಲ್ ಗಳನ್ನು ಹಚ್ಚಿ, ತಮ್ಮ ಮತದಾರರಿರುವ ಪ್ರದೇಶದಲ್ಲಿ ವಿತರಣೆ ಮಾಡುತ್ತಿದ್ದಾರೆ. ಜನರ ಹಸಿವು ತಣಿಸುವ ಅನ್ನದಲ್ಲಿಯೂ ರಾಜಕೀಯವೇ ?" 

"ಅರ್ಹ ಫಲಾನುಭವಿಗಳಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕ್ಷೇತ್ರದ ಕಾರ್ಮಿಕರು ತಮ್ಮದೇ ಕಲ್ಯಾಣ ಮಂಡಳಿಯ ನಿಧಿಯಿಂದ ನೀಡಲಾಗುತ್ತಿರುವ ಸಿದ್ಧ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಹ್ಯಾಂಪರ್ಸ್‌ಗಳಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 30 ಲಕ್ಷ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿದ್ದಾರೆ. ಬೆಂಗಳೂರು ಮಹಾನಗರದಲ್ಲಿಯೇ ಸುಮಾರು 15 ಲಕ್ಷ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯೆಯ ಕಾರ್ಮಿಕರು ಸರ್ಕಾರದ ಯಾವುದೇ ನೆರವಿಲ್ಲದೆ ಉಪವಾಸ ಕೂರುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಕಾರ್ಮಿಕ ಸಚಿವರೇ ಉದ್ಘಾಟಿಸಿದ ಆಹಾರ ವಿತರಣಾ ಯೋಜನೆಯನ್ನು ನಗರದ ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕಾರ್ಮಿಕ ಇಲಾಖೆಯಿಂದ ಮಹಾನಗರಪಾಲಿಕೆಗೆ ವರ್ಗಾಯಿಸಿರುವುದು ಸರ್ಕಾರದ ಹಣದಲ್ಲಿ‌ ಪಕ್ಷದ ಪ್ರಚಾರಕ್ಕಾಗಿಯೇ? ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು ಎರಡು ಲಕ್ಷ ಆಹಾರದ ಪೊಟ್ಟಣಗಳನ್ನು ಕೇಂದ್ರ ಕಿಚನ್ ನಿಂದ ಪೂರೈಸಲಾಗಿದೆ. ಅದೇ ರೀತಿ ಒಂದು ಲಕ್ಷ ಆಹಾರ ಸಾಮಾಗ್ರಿಗಳ ಹ್ಯಾಂಪರ್ಸ್ ಗಳನ್ನು ವಿತರಿಸಲಾಗಿದೆಯಂತೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಈ ಯೋಜನೆಯ ಫಲಾನುಭವಿಗಳ‌ ಲೆಕ್ಕ‌ಕೊಡಿ ಎಂದು ಒತ್ತಾಯಿಸಿದ್ದಾರೆ.

ನಗರದ ಕೆಲವು ಬಿಜೆಪಿಯ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಜಾತಿ-ಧರ್ಮಗಳನ್ನು ವಿಚಾರಿಸಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವ ಬಗ್ಗೆ ದೂರುಗಳಿವೆ. ಬೇರೆ ರಾಜ್ಯಗಳಿಂದ ಬಂದವರೆಲ್ಲರನ್ನೂ ಬಾಂಗ್ಲಾದೇಶೀಯರೆಂದು ದೂರ ಇಟ್ಟಿರುವ ಆರೋಪಗಳಿವೆ. ಹಸಿದ ಹೊಟ್ಟೆಗಳಿಗೆ ಯಾವ ಧರ್ಮ? ಯಾವ ಊರು? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಅವರು, ಆಹಾರ ಸಾಮಗ್ರಿ ವಿತರಣೆಯ ಹೊಣೆಯನ್ನು ಹಲವು ಕಡೆ ಬಿಜೆಪಿಯು ಆರೆಸ್ಸೆಸ್ ಗೆ ಸೇರಿದ ಸಂಸ್ಥೆಗಳಿಗೆ ವಹಿಸಲಾಗಿದೆ. ಈ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಭದ್ರತಾ ಮಂಡಳಿಯ ನಿಧಿಯಲ್ಲಿನ ರೂ.8000 ಕೋಟಿಯನ್ನು ಈ ಸಂಸ್ಥೆಗಳಿಗೆ ಧಾರೆಯೆರೆಯಲು ಸರ್ಕಾರ ಹೊರಟಂತಿದೆ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News