ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಿಎಂ ಬಿಎಸ್‌ವೈಗೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಮನವಿ

Update: 2020-04-12 15:34 GMT

ಯುಎಇ: ಕೋವಿಡ್-19 ಮಹಾಮಾರಿ ರೋಗವು ವಿಶ್ವದಗಲ ವ್ಯಾಪಿಸಿದ ಪರಿಣಾಮ ವಿದೇಶ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಶೀಘ್ರವೇ ತಾಯ್ನಾಡಿಗೆ ಕರೆತರುವ ಬಗ್ಗೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರಾಷ್ಟ್ರೀಯ ಸಮಿತಿಯು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.

ದೇಶದಲ್ಲಿ ದುಡಿಮೆಯ ಕೊರತೆಯಿಂದ ವಿದೇಶಕ್ಕೆ ಬಂದ ಅನಿವಾಸಿಗಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಈಗ ಅವರ ಸಂಕಷ್ಟಗಳನ್ನು ಅರಿತು ರಾಜ್ಯ ಸರಕಾರ ಅವರನ್ನು ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

"ಕರ್ನಾಟಕ ಕಲ್ಚರಲ್ ಫೌಂಡೇಶನ್ ಅನಿವಾಸಿ ಕನ್ನಡಿಗರ ಅಭಿಮಾನವಾಗಿ ಬೆಳೆದು ಬರುತ್ತಿರುವ ಗಲ್ಫ್ ರಾಷ್ಟ್ರದ ಅತೀ ದೂಡ್ಡ ನೆಟ್ವರ್ಕ್ ಆಗಿದೆ. ಇಪ್ಪತ್ತು ಸಾವಿರದಷ್ಟು ಸದಸ್ಯರನ್ನೊಳಗೊಂಡು ಕಾರ್ಯಾಚರಿಸುತ್ತಿರುವ ಕೆಸಿಎಫ್ ರಾಜ್ಯದ ಸಾಮಾಜಿಕ ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುತ್ತಿದೆ. ಉತ್ತಮ ಸೇವೆಗಳೊಂದಿಗೆ ಗುರಿಯಾಗಿಸಿಕೊಂಡು ಕೊಲ್ಲಿ ರಾಷ್ಟ್ರಗಳು ಮತ್ತು ಮಲೇಷ್ಯಾ, ಲಂಡನ್ ನಲ್ಲೂ ಕಳೆದ ಏಳು ವರ್ಷಗಳಿಂದ ಕಾರ್ಯಚರಿಸುತ್ತಿದೆ. ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾಗಿ ರೂಮಲ್ಲಿ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಹಲವಾರು ಕನ್ನಡಿಗರಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳನ್ನು ತಲುಪಿಸಿಕೊಡುತ್ತಿದೆ. ರಾಷ್ಟ್ರಗಳಾದ್ಯಂತ ಅನಿವಾಸಿ ಕನ್ನಡಿಗರ ಸಂತ್ವಾನದ ಕೇಂದ್ರವಾಗಿ ಗುರುತಿಸಿಕೊಂಡ ಏಕೈಕ ಸಂಘಟನೆಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಕೊರೋನ ಸಂಕಷ್ಟದಿಂದ ಅನಿವಾಸಿ ಕನ್ನಡಿಗರನ್ನು ಪಾರುಮಾಡಬೇಕೆಂದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದೊಂದಿಗೆ ಒತ್ತಡ ಹೇರಿ ವಿಮಾನಯಾನವನ್ನು ಆರಂಭಿಸಬೇಕು" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅನಿವಾಸಿಗರ ಕ್ವಾರಂಟೈನ್ ವ್ಯವಸ್ಥೆಗೆ ರಾಜ್ಯದ ಉದ್ದಗಲಕ್ಕೂ ಬೆಳೆದು ನಿಂತಿರುವ ವಿದ್ಯಾಸಂಸ್ಥೆಗಳು, ಹಾಸ್ಟೆಲ್ ಸಮುಚ್ಚಯಗಳು ತಯಾರಾಗಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News