8 ಮಂದಿ ಕೊರೋನ ಸೋಂಕಿತರು ಸಂಪೂರ್ಣ ಗುಣಮುಖ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ

Update: 2020-04-12 17:20 GMT

ಚಿಕ್ಕಬಳ್ಳಾಪುರ, ಎ.12: ಜಿಲ್ಲೆಯಲ್ಲಿ ದೃಢಪಟ್ಟಿದ್ದ ಒಟ್ಟು 12 ಕೊರೋನ ಸೋಂಕಿತ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟಿದ್ದು, 8 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಶೀಘ್ರದಲ್ಲಿಯೇ ಜಿಲ್ಲೆ ಕೊರೋನ ಮುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

ನಗರದ ಜಿಪಂ ಸಭಾಂಗಣಧಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನ ಎರಡು ಕುಟುಂಬಗಳು ವಿದೇಶದಿಂದ ಬಂದಿದ್ದು, ಈ ಎರಡೂ ಕುಟುಂಬಗಳಿಗೆ ಸೋಂಕು ಹಬ್ಬಿತ್ತು. ಇದರಿಂದ ಮಹಿಳೆಯೊಬ್ಬರು ಮೃತಪಟ್ಟು 11 ಮಂದಿ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದರು. 

ಕೊರೋನ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ ಒಟ್ಟು 11 ಮಂದಿಯಲ್ಲಿ ಈ ಹಿಂದೆಯೇ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರವಿವಾರ ಐದು ಮಂದಿ ಏಕ ಕಾಲದಲ್ಲಿ ಬಿಡುಗಡೆ ಆಗಿದ್ದಾರೆ. ಇದರಿಂದ ಒಟ್ಟು 8 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ಮೂವರು ಮಾತ್ರ ಚಿಕಿತ್ಸೆಯಲ್ಲಿದ್ದಾರೆ ಎಂದು ಹೇಳಿದರು.

ಕೊರೋನ ಸೋಂಕು ಜಿಲ್ಲೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತಿಯ ಹಂತದ ಸಂಪರ್ಕ ಹೊಂದಿದ 39 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. ಇನ್ನು ವಿದೇಶದಿಂದ ಬಂದವರು, ದಿಲ್ಲಿಯಿಂದ ಹಿಂತಿರುಗಿದವರು ಸೇರಿ ಇತರೆ ಎಲ್ಲರ ರಕ್ತದ ಮಾದರಿಗಳನ್ನೂ ಪರೀಕ್ಷೆ ಮಾಡಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿರುವುದಾಗಿ ಅವರು ತಿಳಿಸಿದರು.

ಹಾಗಾಗಿ ಜಿಲ್ಲೆಯಲ್ಲಿ ಸೋಂಕು ಬಹುತೇಕ ಅಂತ್ಯವಾಗಿದ್ದು, ಸೋಂಕಿತರಲ್ಲಿ ಒಬ್ಬರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮತ್ತು ಇಬ್ಬರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಅತೀ ಶೀಘ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವರಿಗೆ ಆರಂಭದಿಂದ ಚಿಕಿತ್ಸೆ ನೀಡಿದ ಎಲ್ಲ ಆರೋಗ್ಯ ಸಿಬ್ಬಂದಿಯೂ ಚಪ್ಪಾಳೆ ಜೊತೆಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟಿರುವುದಾಗಿ ತಿಳಿಸಿದರು.

ಇನ್ನೂ 14 ದಿನ ಕ್ವಾರಂಟೈನ್: ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಎಂಟು ಮಂದಿಯನ್ನೂ ನೇರವಾಗಿ ಮನೆಗೆ ಕಳುಹಿಸದೆ ಗೌರಿಬಿದನೂರಿನ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಸಿದ್ದಪಡಿಸಿರುವ ಕ್ವಾರಂಟೈನ್ ಕೇಂದ್ರದಲ್ಲಿರಿಸಿಕೊಂಡು ಪರಿಶೀಲಿಸಲಾಗುವುದು. ಇವರಲ್ಲಿ ಒಬ್ಬರು ಮಾತ್ರ 75 ವರ್ಷದ ವೃದ್ದರಾಗಿದ್ದು, ಅವರಿಗೆ ಗೌರಿಬಿದನೂರು ತಾಲೂಕು ಆಸ್ಪತ್ರೆಯ ಕ್ವಾರಂಟೈನ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ 14 ದಿನಗಳು ಪೂರೈಸಿದ ನಂತರ ಅವರನ್ನು ಸ್ವತಂತ್ರವಾಗಿ ಅವರ ನಿವಾಸಗಳಿಗೆ ಕಳುಹಿಸಲಾಗುವುದು. ಅಲ್ಲಿಯವರೆಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯಲ್ಲಿಯೇ ಇರಲಿದ್ದು, ಇವರು ಈಗಲೇ ಯಾವುದೇ ಸೋಂಕಿಲ್ಲದೆ ಸಂಪೂರ್ಣ ಗುಣಮುಖರಾಗಿರುವುದರಿಂದ ಯಾವುದೇ ಭಯ ಇಲ್ಲದೆ ಜೀವನ ನಡೆಸಬಹುದಾಗಿದೆ ಎಂದು ತಿಳಿಸಿದರು.

ಜನತೆ ಮನೆಯಿಂದ ಹೊರಬಾರದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು, ಜನ ಗುಂಪು ಸೇರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರುವ ಮೂಲಕ ಸಂಪೂರ್ಣ ಕೊರೋನ ಸೋಂಕು ಮುಕ್ತ ಜಿಲ್ಲೆಯನ್ನಾಗಿಸಲು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮಿಥುನ್‍ ಕುಮಾರ್ ಮಾತನಾಡಿ, ಎ.14ರ ವರೆಗೂ ಸರ್ಕಾರ ಲಾಕ್‍ಡೌನ್ ಮಾಡಿ ಆದೇಶ ನೀಡಿದ್ದು, ಅದನ್ನು ಸಮರ್ಪಕವಾಗಿ ಪಾಲಿಸಲಾಗುವುದು. ನಂತರ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಲಾಕ್‍ಡೌನ್ ಮುಂದುವರಿಸುವುದು ಇಲ್ಲವೇ ತೆರವುಗೊಳಿಸುವುದು ತೀರ್ಮಾನವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಒ ಪೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯೋಗೇಶ್‍ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News