×
Ad

ಲಾಕ್‍ಡೌನ್ ಎಫೆಕ್ಟ್: ಜಮೀನಿನಲ್ಲಿ ಕೊಳೆಯುತ್ತಿರುವ ಹಣ್ಣು-ತರಕಾರಿಗಳು !

Update: 2020-04-12 23:30 IST

ಬೆಂಗಳೂರು, ಎ. 12: ರಾಜ್ಯದಲ್ಲಿ ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ, ಮಾವು ಸೇರಿದಂತೆ ಹಣ್ಣು ಮತ್ತು ಸೊಪ್ಪು, ತರಕಾರಿ ಕಟಾವಿನ ಸಂದರ್ಭದಲ್ಲಿ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಿರುವ ಲಾಕ್‍ಡೌನ್ ದಿಗ್ಬಂಧನದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

'ಹಣ್ಣು-ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಯಾವುದೇ ಅಡ್ಡಿಯಿಲ್ಲ. ರೈತರು ಮತ್ತು ವ್ಯಾಪಾರಸ್ಥರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗುವುದು. ರೈತರಿಗೆ ಹಸಿರು ಪಾಸ್ ನೀಡಲಾಗುವುದು' ಎಂದು ಸರಕಾರ ಹೇಳುತ್ತಿದ್ದರೂ, ರಾಜ್ಯದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಬೀದಿಗೆ ಎಸೆಯುತ್ತಿರುವುದು ನಿಲ್ಲುತ್ತಿಲ್ಲ.

ವ್ಯಾಪಕ ವದಂತಿಗಳು: ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರ ಜಮೀನಿನಲ್ಲಿಯೇ ಸೊಪ್ಪು, ಹಣ್ಣು-ತರಕಾರಿ ಸೇರಿದಂತೆ ಇನ್ನಿತರ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದ ದಲ್ಲಾಳಿಗಳು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಒಂದು ಸಮುದಾಯದ ಮೇಲಿನ ಕೊರೋನ ಬಗೆಗಿನ ಸುಳ್ಳು ಸುದ್ದಿ, ವದಂತಿಗಳೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ರಾಜ್ಯ ಸರಕಾರದ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ, ಒಂದು ಸಮುದಾಯದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಿಂದ ರೈತರ ಹಣ್ಣು, ತರಕಾರಿ ಸೇರಿದಂತೆ ಇನ್ನಿತರ ಕೃಷಿ ಉತ್ಪನ್ನಗಳು ರೈತರ ಜಮೀನಿನಲ್ಲೇ ಕೊಳೆಯುವಂತಾಗಿದೆ. ಅಲ್ಲದೆ, ರಾಜ್ಯದಿಂದ ಹೊರ ರಾಜ್ಯಕ್ಕೆ ಹಣ್ಣು-ತರಕಾರಿ ಸಾಗಾಣಿಕೆ ನಿರ್ಬಂಧ ಹೇರಿದ ಕಾರಣಕ್ಕೆ ರೈತರು ಕಂಗಾಲಾಗುವ ದುಸ್ಥಿತಿ ಎದುರಾಗಿದೆ.

ಹಾಪ್‍ಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆ ನೆರವು ಪಡೆದು ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಿ, ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಸರಕಾರವೇ ತಲುಪಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ವಾಸ್ತವಿಕವಾಗಿ ಅಸಾಧ್ಯ. ಹೀಗಾಗಿ ರೈತರು ಮತ್ತು ಗ್ರಾಹಕರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಇಚ್ಛಾಶಕ್ತಿ ಇಲ್ಲ: "ದೊಡ್ಡ ಪ್ರಮಾಣದಲ್ಲಿ ಪೌಷ್ಟಿಕಾಂಶವುಳ್ಳ ಹಣ್ಣು-ತರಕಾರಿಗಳನ್ನು ರೈತರು ಮಣ್ಣು ಮಾಡುತ್ತಿರುವುದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಸರಕಾರಕ್ಕೆ ಕನಿಷ್ಟ ಇಚ್ಛಾಶಕ್ತಿ ಇದ್ದಿದ್ದರೆ ರೈತರ ಕೃಷಿ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ರೈತರ ಸಮೂಹದ ನೆರವಿಗೆ ನಿಲ್ಲಬೇಕಾಗಿತ್ತು" ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಕೃಷಿ, ತೋಟಗಾರಿಕೆ ಇಲಾಖೆ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಜನರಿಗೆ ಪೂರೈಕೆ ಮಾಡುವ ಕೆಲಸ ಮಾಡಬೇಕಿತ್ತು. ಬೆಂಗಳೂರು ನಗರ ಒಂದರಲ್ಲೆ 10 ಸಾವಿರ ತಳ್ಳುಗಾಡಿ ವ್ಯಾಪಾರಿಗಳಿದ್ದಾರೆ. ಅವರಿಗೆ ಹಣ್ಣು-ತರಕಾರಿ ಪೂರೈಕೆ ಮಾಡಿದರೆ ಅವರು ಮನೆ-ಮನೆಗೆ ತಲುಪಿಸುವ ಕೆಲಸ ಮಾಡುತ್ತಾರೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಪತ್ರಿಕೆಯೊಂದಿಗೆ ತಿಳಿಸಿದ್ದಾರೆ.

"ನಾನೇ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ವಿಚಾರ ಗಮನಕ್ಕೆ ತಂದಿರುವೆ. ಆದರೂ, ರಾಜ್ಯದಲ್ಲಿ ರೈತರ ಕೃಷಿ ಉತ್ಪನ್ನಗಳ ಖರೀದಿ ಆಗುತ್ತಿಲ್ಲ. ರೈತರ ಸಹಾಯಕ್ಕೆ ಧಾವಿಸಲು ಸರಕಾರಕ್ಕೆ ಇದಕ್ಕಿಂತ ಬೇರೆ ಅವಕಾಶ ಸಿಗಲು ಸಾಧ್ಯವೇ ಇಲ್ಲ. ಖಂಡಿತ ಇದು ನಾಗರಿಕ ಸರಕಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಯಿಲೆ ಜಾತಿ ಧರ್ಮ ನೋಡಿ ಬರುವುದಿಲ್ಲ

ದಿಲ್ಲಿ ಧಾರ್ಮಿಕ ಸಭೆ ನೆಪದಲ್ಲಿ ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳು ಒಂದು ಸಮುದಾಯದ ಬಗ್ಗೆ ವದಂತಿ ಹರಡಿದ್ದರ ಪರಿಣಾಮ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರ ಕೃಷಿ ಉತ್ಪನ್ನಗಳು ಕೊಳೆಯುತ್ತಿವೆ. ಇಂತಹ ದ್ವೇಷದ ಮನೋಭಾವ ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಕಾಯಿಲೆ ಜಾತಿ-ಧರ್ಮ, ಬಣ್ಣ-ಭಾಷೆಗಳನ್ನು ನೋಡಿ ಬರುವುದಿಲ್ಲ. ಯಾವುದೇ ಒಂದು ಸಮುದಾಯದ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಯಾರು ಕೈಹಾಕಬಾರದು'

-ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News