ಕೊರೋನ ಆತಂಕದ ನಡುವೆಯೇ ಈಜುಕೊಳದಲ್ಲಿ ಸಚಿವ ಡಾ.ಸುಧಾಕರ್: ವ್ಯಾಪಕ ಟೀಕೆ

Update: 2020-04-13 12:35 GMT

ಚಿಕ್ಕಬಳ್ಳಾಪುರ, ಎ.13: ರಾಜ್ಯದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಕ್ಕಳೊಂದಿಗೆ ಈಜುಕೊಳದಲ್ಲಿ ಈಜಾಡುವ ಚಿತ್ರವನ್ನು ಟ್ವೀಟ್ ಮಾಡಿದ್ದು, ಈ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ರವಿವಾರ ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿರುವ ಈಜುಕೊಳದಲ್ಲಿ ಮಕ್ಕಳೊಂದಿಗೆ ಈಜಾಡುವ ಚಿತ್ರವನ್ನು ಸಚಿವ ಡಾ.ಕೆ.ಸುಧಾಕರ್ ಅವರು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. 'ತುಂಬಾ ಸಮಯದ ನಂತರ ನನ್ನ ಮಕ್ಕಳೊಂದಿಗೆ ಈಜಾಡುತ್ತಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇನೆ' ಎಂದು ಟ್ವೀಟ್ ನಲ್ಲಿ ಬರೆದಿದ್ದರು. ಆದರೆ ಡಾ.ಕೆ.ಸುಧಾಕರ್ ಅವರ ಟ್ವೀಟ್ ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಚಿವರ ಕಾರ್ಯವೈಖರಿಗೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿದ್ದಾರೆ. ಇದರ ಬೆನ್ನಲ್ಲೇ ಸುಧಾಕರ್ ಅವರು ಟ್ವೀಟ್ ಅನ್ನು ತಮ್ಮ ಖಾತೆಯಿಂದ ಅಳಿಸಿ ಹಾಕಿದ್ದಾರೆ.

ಈ ಬಗ್ಗೆ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ "ಇಡೀ ವಿಶ್ವವೇ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಅಚ್ಚರಿಯಾಗಿದೆ'' ಎಂದು ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ವಿರುದ್ಧ ಹೋರಾಡಲು ಸರಕಾರ ಎಲ್ಲ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ, ಜನರನ್ನು ಮನೆಯೊಳಗೆ ಬಂಧಿಯಾಗುವಂತೆ ಹೇಳಲಾಗುತ್ತಿದೆ ಎಂದರು.

ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ಕೊರೋನ ವಿರುದ್ಧದ ಹೋರಾಟದ ಜವಾಬ್ದಾರಿಯನ್ನು ಸರಕಾರ ನೀಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ. ಈ ವಿಚಾರವಾಗಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೆ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೆ ಯಾಕೆ ಸುಧಾಕರ್ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ, ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ. ಕೊರೋನ ವೈರಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿರುವ ಸಚಿವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕಿಂತ ಬಿಜೆಪಿಯ ಹೈಕಮಾಂಡ್ ಏನು ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಪಿಎಂ ಕೇರ್ ಅಲ್ಲ, ಇಂಡಿಯಾ ಕೇರ್

ರಾಷ್ಟ್ರೀಯ ಪರಿಹಾರ ನಿಧಿ ಅಂತಾ ಇದೆ. ಇದು ಪಿಎಂ ಕೇರ್ ಅನ್ನೋದಕ್ಕಿಂತ ಇಂಡಿಯಾ ಕೇರ್ ಆಗಬೇಕಿತ್ತು. ಈ ಪರಿಹಾರ ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು. ದೇಣಿಗೆ ಪಡೆಯಿರಿ, ಅದನ್ನು ಪ್ರಶ್ನಿಸಲ್ಲ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆ ಮರೆಯಬಾರದು. ನಮಗೆ ನೀಡಬೇಕಾದ ನೆರವು ನೀಡಬೇಕು. ದೇಣಿಗೆ ಜೊತೆಗೆ ನಮ್ಮ ನಾಯಕರು ನೀಡಿರುವ ಸಲಹೆಯಂತೆ ಜಾಹೀರಾತು ಹಾಗೂ ಇತರೆ ಯೋಜನೆ ನಿಲ್ಲಿಸಿ, ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಬಳಸಿಕೊಳ್ಳಿ. ನೀವು ಇದನ್ನು ಹೇಗೆ ಬಳಸಿಕೊಳ್ಳುತ್ತೀರೋ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು, ಆದರೆ, ಅದು ಸಮಾನವಾಗಿ ಹಂಚಿಕೆಯಾಗಬೇಕು.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News