ಕೊರೋನ ಹಾವಳಿ: ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಸರಕಾರ ನಿರ್ಧಾರ

Update: 2020-04-13 13:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.13: ಕೋವಿಡ್ 19 ಹಾವಳಿಯಿಂದ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಲಾಗುತ್ತಿದ್ದು, ಈಗ ಗ್ರಾಮ ಪಂಚಾಯತ್ ಚುನಾವಣೆ ಸರದಿಯಾಗಿದ್ದು, ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಸರಕಾರ ಮಾಹಿತಿ ನೀಡಿದ್ದು, ನವೆಂಬರ್ ನಲ್ಲಿ ಚುನಾವಣೆ ನಡೆಸುವುದಾಗಿ ಆಯೋಗಕ್ಕೆ ವರದಿ ನೀಡಿದೆ. 1933ರ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಗ್ರಾಮ ಪಂಚಾಯತ್‍ಗಳ ಅವಧಿ ಮುಗಿದ ಮೇಲೆ ಮುಂದೂಡಲು ಅವಕಾಶವಿಲ್ಲ. ಆದರೆ, ಕೋವಿಡ್ 19 ಹರಡುವುದನ್ನು ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವುದರಿಂದ ಅದೇ ಕಾರಣ ಮುಂದಿಟ್ಟುಕೊಂಡು ರಾಜ್ಯ ಸರಕಾರ ಆರು ತಿಂಗಳ ಚುನಾವಣೆ ಮುಂದೂಡಲು ತೀರ್ಮಾನಿಸಿದೆ.

6 ಸಾವಿರ ಪಂಚಾಯತ್‍ಗಳು: ರಾಜ್ಯದಲ್ಲಿ ಆರು ಸಾವಿರ ಗ್ರಾಮ ಪಂಚಾಯತ್‍ಗಳಿವೆ. ಅವುಗಳ ಅವಧಿ ಬಹುತೇಕ ಎಪ್ರಿಲ್ ಅಂತ್ಯ ಅಥವಾ ಮೇ 15 ಕ್ಕೆ ಮುಕ್ತಾಯವಾಗಲಿವೆ. ಗ್ರಾಮ ಪಂಚಾಯತ್‍ಗಳ ಅವಧಿ ಮುಗಿಯುವ 45 ದಿನ ಮೊದಲೇ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಘೋಷಣೆ ಮಾಡಬೇಕು. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆ ನಡೆಸದಿರಲು ತೀರ್ಮಾನಿಸಿರುವ ಬಗ್ಗೆ ಆಯೋಗಕ್ಕೆ ಸರಕಾರ ವರದಿ ನೀಡಿದೆ. ಲಾಕ್‍ಡೌನ್ ಪರಿಣಾಮ ಮೇ ಅಂತ್ಯದವರೆಗೂ ಇರಲಿದೆ. ಸದ್ಯ ಸಮಗ್ರ ಆಡಳಿತ ಯಂತ್ರ ಕೋವಿಡ್ 19 ನಿಯಂತ್ರಣಕ್ಕೆ ಮೀಸಲಾಗಿದೆ.

ವಿಶೇಷ ಉಸ್ತುವಾರಿ ಸಮಿತಿ: ಮೇ 15ಕ್ಕೆ ಗ್ರಾಮ ಪಂಚಾಯತ್ ಸದಸ್ಯರ ಐದು ವರ್ಷದ ಅವಧಿ ಮುಕ್ತಾಯವಾಗಲಿದ್ದು, ಅನಂತರ 6 ತಿಂಗಳು ಪಂಚಾಯತ್‍ಗಳ ಕಾರ್ಯನಿರ್ವಹಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕೇ ಅಥವಾ ವಿಶೇಷ ಸಮಿತಿ ರಚನೆ ಮಾಡಬೇಕೇ ಎಂಬುದರ ಕುರಿತು ಸರಕಾರದ ಆಲೋಚನೆ ನಡೆಸಿವೆ ಎಂದು ತಿಳಿದುಬಂದಿದೆ.

ಆಡಳಿತಾಧಿಕಾರಿ ಬದಲು ವಿಶೇಷ ಸಮಿತಿ ರಚಿಸಿ, ಪಂಚಾಯತ್ ರಾಜ್ ಕಾಯ್ದೆಯ ಕಲಂ 8ರ ಅಡಿಯಲ್ಲಿ ಸಮಿತಿಗೆ ಸದಸ್ಯರನ್ನು ನೇಮಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಸಮಿತಿಗೆ ಹಾಲಿ ಪಂಚಾಯತ್ ಸದಸ್ಯರನ್ನು ಅಥವಾ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿರುವ ಯಾರನ್ನಾದರೂ ಸದಸ್ಯರನ್ನಾಗಿ ಮಾಡಲು ಅವಕಾಶವಿರುತ್ತದೆ. ಆ ಸಮಿತಿಯ ಮೂಲಕ ಚುನಾವಣೆ ನಡೆಯುವವರೆಗೂ ಪಂಚಾಯತ್ ಆಡಳಿತ ಚಟುವಟಿಕೆಗಳನ್ನು ನಡೆಸುವ ಕುರಿತು ಗಂಭೀರ ಚಿಂತನೆಯನ್ನು ಸರಕಾರದ ಮಟ್ಟದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಜಿಲ್ಲಾ ಪಂಚಾಯತ್ ಜೊತೆಗೆ ಚುನಾವಣೆ?: ಸದ್ಯದ ಮಾಹಿತಿ ಪ್ರಕಾರ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನವೆಂಬರ್ ಅಂತ್ಯದಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ. ಆದರೆ, ಮುಂದಿನ ವರ್ಷ 2021 ರ ಮೇನಲ್ಲಿ ನಡೆಯುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿಯೇ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ವಿಶೇಷ ಸಂದರ್ಭದಲ್ಲಿ ಮುಂದೂಡಲು ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯ ಸೆಕ್ಷನ್ 8ರ ಅಡಿ ಅವಕಾಶವಿದೆ. ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪಂಚಾಯತ್‍ರಾಜ್ ಪರಿಷತ್‍ನ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News