ಹಾಸನ: ಪ್ರಚೋದನಕಾರಿ ಪೋಸ್ಟ್ ಹಾಕಿದವನ ವಿರುದ್ಧ ಕ್ರಮ ಕೈಗೊಂಡ ಪೊಲೀಸರ ವಿರುದ್ಧವೇ ತನಿಖೆ !

Update: 2020-04-13 16:17 GMT
ತೇಜ್ ಕುಮಾರ್ ಶೆಟ್ಟಿ ಮನೆಗೆ ಭೇಟಿ ನೀಡಿದ ಸ್ಥಳೀಯ ಬಿಜೆಪಿ ಮುಖಂಡರು

ಹಾಸನ, ಎ.13 : ಕೊರೊನ ವೈರಸ್ ಹಾಗು ತಬ್ಲೀಗಿ ಜಮಾಅತ್ ನಡುವೆ ನಂಟು ಕಲ್ಪಿಸಿ ಪ್ರಚೋದನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಕ್ಕೆ ಪೊಲೀಸರ ವಿರುದ್ಧವೇ ತನಿಖೆ ನಡೆದಿರುವ ಘಟನೆ ಇಲ್ಲಿನ ಬೇಲೂರು ತಾಲೂಕಿನ ಬಿಕ್ಕೋಡು ಎಂಬಲ್ಲಿ ನಡೆದಿದೆ. 

ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ ಬಂಧನಕ್ಕೊಳಗಾದ ಬಿಜೆಪಿ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ. ಬೇಲೂರು ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಹಾಗೂ ಅರೇಹಳ್ಳಿ ಎಸೈ ಬಾಲು ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಈಗ ತನಿಖೆ ಎದುರಿಸುತ್ತಿರುವವರು. ಸರಕಾರದ ಆದೇಶದಂತೆ ಇದೀಗ ಜಿಲ್ಲಾ ಎಸ್ಪಿ ಶ್ರೀನಿವಾಸ ಗೌಡ ಅವರು ಇವರಿಬ್ಬರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. 

ತೇಜ್ ಕುಮಾರ್ ಶೆಟ್ಟಿ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡ ಬೆನ್ನಿಗೇ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪೊಲೀಸರ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ. 

"ಕೊರೊನ ಸಂಬಂಧ ತಬ್ಲೀಗಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ " ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದರು.

  

ಕೊರೊನ ವೈರಸ್ ತಬ್ಲೀಗಿ ಜಮಾಅತ್ ಮುಖ್ಯಸ್ಥ ಮೌಲಾನಾ ಸಾದ್ ಅವರಿಗಿಂತ ದುರ್ಬಲ ಎಂಬರ್ಥದ ಫೇಸ್ ಬುಕ್ ಪೋಸ್ಟ್ ಹಾಕಿದ್ದಕ್ಕೆ ತೇಜ್ ಕುಮಾರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಹಾಸನ ಪೊಲೀಸರು ಬಂಧಿಸಿದ್ದರು. ಆದರೆ ಇದೀಗ ಕಾನೂನು ಕ್ರಮ ಕೈಗೊಂಡ ಪೊಲೀಸರೇ ತನಿಖೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. "ನಿಯಮ ಪ್ರಕಾರ ವಿಭಾಗ ಮುಖ್ಯಸ್ಥರು ನೀಡಬೇಕಾದ ಪತ್ರಿಕಾ ಹೇಳಿಕೆಯನ್ನು ಈ ಇಬ್ಬರು ನೀಡಿದ್ದಕ್ಕೆ ಅವರ ವಿರುದ್ಧ ಇಲಾಖಾ  ತನಿಖೆ ನಡೆಯುತ್ತಿದೆ. ಅವರನ್ನು ಅಮಾನತು ಮಾಡಿಲ್ಲ" ಎಂದು ಹಾಸನ ಎಸ್ಪಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಪಿ ರೇಣುಕಾಚಾರ್ಯ ಕೂಡಾ ಬಿಜೆಪಿ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಪರ ನಿಂತಿದ್ದು, "ಬಂಧನವಾಗಿದ್ದ ಹಿಂದೂ ಕಾರ್ಯಕರ್ತ ತೇಜಸ್ ಶೆಟ್ಟಿ ಬಿಡುಗಡೆಯಾಗಿದ್ದು. ಇದೀಗ ಖುದ್ದು ನಾನೇ ತೇಜಸ್ ಶೆಟ್ಟಿ ಜೊತೆ ಮಾತನಾಡಿ ಆತ್ಮಸ್ಥೈರ್ಯ ತುಂಬಿದ್ದೇನೆ ಬಿಜೆಪಿ ಕಾರ್ಯಕರ್ತರ ಪರ ನಮ್ಮ ಬಿಜೆಪಿ ಸರ್ಕಾರವಿದೆ"

"ಹಾಸನದಲ್ಲಿ ಸಾಮಾಜಿಕ ಜಾಲತಾಣ ಪ್ರಕರಣದ ತೇಜ ಕುಮಾರ್ ಶೆಟ್ಟಿಯನ್ನು ಹೀನಾಯವಾಗಿ ನಡೆಸಿಕೊಂಡು ಅತಿರೇಕದ ವರ್ತನೆ ತೋರಿದ್ದ ಸಬ್ ಇನ್ಸ್ ಪೆಕ್ಟರ್ ಅವರನ್ನು ವರ್ಗಾವಣೆ ಮಾಡಿರುವ ನಮ್ಮ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. 

ಅಲ್ಲದೇ, ಪ್ರಚೋದನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಯಾದ ತೇಜ್ ಕುಮಾರ್ ಶೆಟ್ಟಿ ಮನೆಗೆ ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿದ್ದು, ಕಾರ್ಯಕರ್ತನ ಬೆಂಬಲಕ್ಕೆ ನಿಂತಿದ್ದಾರೆ.

ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ವಕ್ತಾರ, ಮಾಜಿ ಸಂಸದ ಉಗ್ರಪ್ಪ ಕೊರೋನ ನಿಗ್ರಹದಲ್ಲಿ ವಿಫಲವಾಗಿರುವ ರಾಜ್ಯ, ಕೇಂದ್ರ ಸರ್ಕಾರಗಳು ಇದನ್ನು ಈಗ ಹಿಂದೂ ಮುಸ್ಲಿಂ ವಿಷಯ ಮಾಡಿವೆ. ಕಾನೂನುಪ್ರಕಾರ ಕೆಲಸ ಮಾಡಿದ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News