ಅನಿವಾಸಿ ಕನ್ನಡಿಗರ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ‌ ಕೂಡಲೇ ಮಧ್ಯಪ್ರವೇಶಿಸಲಿ: ಪಾಪ್ಯುಲರ್ ಫ್ರಂಟ್

Update: 2020-04-14 11:29 GMT

ಬೆಂಗಳೂರು: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ಗೊಳಗಾಗಿ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿರುವಂತೆಯೇ, ಇತ್ತ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರೂ ಗಂಭೀರ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಈ ಅನಿವಾಸಿಗರ ಅಳಲನ್ನು ಆಲಿಸಲು ರಾಜ್ಯ ಸರಕಾರವು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಆಗ್ರಹಿಸಿದ್ದಾರೆ.

ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್, ಬಹರೈನ್, ಕುವೈಟ್ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿ ಕೊರೋನ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಇದು ಅನಿವಾಸಿ ಭಾರತೀಯರನ್ನೂ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಹೋಗಿರುವ ಬಹಳಷ್ಟು ಮಂದಿ ಅನಿವಾಸಿಗರು ಈಗಾಗಲೇ ಉದ್ಯೋಗ ಕಳೆದುಕೊಂಡು, ದೈನಂದಿನ ಖರ್ಚನ್ನೂ ಭರಿಸಲಾಗದೇ ಅತಂತ್ರ ಸ್ಥಿತಿಯಲ್ಲಿ ಜೀವನ ದೂಡುತ್ತಿದ್ದಾರೆ. ದೇಶದ ಆರ್ಥಿಕತೆಗೆ ಅನಿವಾಸಿಗರ ಕೊಡುಗೆ ಅಪಾರ. ಆದರೆ ಸಂಕಷ್ಟಕ್ಕೊಳಗಾಗಿರುವ ಇವರ ಸಮಸ್ಯೆ ಬಗೆಹರಿಸಲು ಆಡಳಿತ ವ್ಯವಸ್ಥೆ ಉತ್ಸುಕತೆ ತೋರದಿರುವುದು ವಿಪರ್ಯಾಸ. ಅಭದ್ರತೆಯಲ್ಲಿರುವ ಅಲ್ಲಿನ ಅನಿವಾಸಿಗರು ತಮ್ಮನ್ನ ಊರಿಗೆ ಕರೆಸಿಕೊಳ್ಳಬೇಕೆಂದು ಮೊರೆ ಇಡುತ್ತಿದ್ದರೂ ಕೇಂದ್ರ‌ವಾಗಲೀ, ರಾಜ್ಯ ಸರಕಾರವಾಗಲೀ ಈ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸನ್ನಿವೇಶವು ಅವರನ್ನು ಮತ್ತಷ್ಟು ಆತಂಕಕ್ಕೆ‌ ತಳ್ಳಿದೆ.

ಅನಿವಾಸಿ ಕನ್ನಡಿಗರ ವಿವಿಧ‌ ಸಾಮಾಜಿಕ ಸಂಘಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಕನ್ನಡಿಗರನ್ನು ತಲುಪುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅನಿವಾಸಿಗರ ಸುರಕ್ಷತೆಯನ್ನು ಖಾತರಿಪಡಿಸುತ್ತಾ, ಅವರನ್ನು ಊರಿಗೆ ಕರೆ ತರುವ ನಿಟ್ಟಿನಲ್ಲಿ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಜೊತೆಗೆ ಈಗಾಗಲೇ ಹಲವು ಸಂಸ್ಥೆಗಳು ಕ್ವಾರಂಟೈನ್ ವ್ಯವಸ್ಥೆಗಾಗಿ ಸ್ಥಳಾವಕಾಶ ಕಲ್ಪಿಸಲು ಮುಂದಾಗಿದ್ದು, ಸರಕಾರಗಳು ಇದನ್ನು ಸದುಪಯೋಗಪಡಿಸಿಕೊಂಡು ಅನಿವಾಸಿಗರ ಆತಂಕವನ್ನು ನಿವಾರಿಸಬೇಕು ಎಂದು ಯಾಸಿರ್ ಹಸನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News