×
Ad

ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಆ್ಯಂಬುಲೆನ್ಸ್ ಯೋಧ ಅಮೀರ್ ಜಾನ್

Update: 2020-04-14 20:23 IST

ಬೆಂಗಳೂರು: ಕೊರೋನ ಸೋಂಕಿನ ಭಯದಿಂದ ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನೇ ಕೆಲವೆಡೆ ಬಾಡಿಗೆ ಮನೆಗಳಿಂದ ಹೊರಹಾಕುತ್ತಿರುವ ವರದಿಗಳು ಬಂದಿದ್ದವು. ಇಲ್ಲೊಂದು ಕೊರೋನ ಯೋಧನ ಕತೆಯಿದೆ. ಈತ ವೈದ್ಯನೂ ಅಲ್ಲ, 'ವೈದ್ಯಕೀಯ ಸಿಬ್ಬಂದಿಯೂ' ಅಲ್ಲ. ಆದರೆ ಕೊರೋನ ವಿರುದ್ಧದ ಹೋರಾಟದಲ್ಲಿ ಈತನದ್ದು ನಿರ್ಣಾಯಕ ಪಾತ್ರ ಎಂದು ಹೇಳಿದರೂ ತಪ್ಪಲ್ಲ. ಏಕೆಂದರೆ ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸುವ ಆಂಬುಲೆನ್ಸ್ ನ ಚಾಲಕ ಈತ. ಈ ಧೈರ್ಯಶಾಲಿಯ ಹೆಸರು ಅಮೀರ್ ಜಾನ್ .

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಅಮೀರ್ ಜಾನ್ ತನ್ನ ಕುಟುಂಬವನ್ನು ಬಿಟ್ಟು ಬಂದು ಈಗ ಬೆಂಗಳೂರಿನಲ್ಲೇ ಠಿಕಾಣಿ ಹೂಡಿದ್ದಾರೆ. ಈವರೆಗೆ 17 ಮಂದಿ ಕೊರೋನ ಸೋಂಕಿತರನ್ನು ನಗರದ ಬೌರಿಂಗ್ ಅಥವಾ ವಿಕ್ಟೊರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದರು. 

ಈ ಹಿಂದೆ ಬಸ್ ಡ್ರೈವರ್ ಆಗಿ ಕೆಲಸ ಮಾಡಿದ್ದ 33 ವರ್ಷದ ಅಮೀರ್ ಜಾನ್ ಈಗ ಕೊರೊನ ಸೋಂಕಿತರನ್ನು ಸಾಗಿಸುವ ಆಂಬುಲೆನ್ಸ್ ಚಾಲಕರಾಗಿ ಸೇರಿದ್ದಾರೆ. ಮಾರ್ಚ್ ಕೊನೆಯಲ್ಲಿ  108 ಆಂಬುಲೆನ್ಸ್ ಸೇವೆಯವರು ಕೊರೊನ ಸೋಂಕಿತರನ್ನು ಸಾಗಿಸಲು ಆಂಬುಲೆನ್ಸ್ ಡ್ರೈವರ್ ಗಳು ಬೇಕು ಎಂದು ಆಹ್ವಾನಿಸಿದ್ದರು. ಹೆಚ್ಚಿನವರು ಸೋಂಕು ತಗಲುವ ಭಯದಲ್ಲಿ ಹೋಗಲಿಲ್ಲ. ಆದರೆ ಅಮೀರ್ ಮುಂದೆ ಬಂದರು. 

"ಎಲ್ಲರೂ ಮನೆಯಲ್ಲಿ ಕೂತುಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಇಂತಹ ಅನಿವಾರ್ಯ ಕೆಲಸವನ್ನು ಮಾಡಲೇಬೇಕು" ಎಂದು ಹೇಳುತ್ತಾರೆ ಅಮೀರ್ ಜಾನ್. ಆಮೀರ್ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಕೊರೊನ ಲಾಕ್ ಡೌನ್ ಹೀರೋಸ್ ಸರಣಿಯಲ್ಲಿ  ವರದಿ ಮಾಡಿದೆ. 

"ನಾನು ಮನೆಯಲ್ಲಿ ಈ ಬಗ್ಗೆ ಚರ್ಚಿಸಿದಾಗ ಅವರು ಮೊದಲು ಹಿಂಜರಿದರು. ಮತ್ತೆ ಒಪ್ಪಿದರು. ನೇರವಾಗಿ ಬೆಂಗಳೂರಿಗೆ ಬಂದವನೇ ಬಸವೇಶ್ವರನಗರದ 108 ಆಂಬುಲೆನ್ಸ್ ಕಚೇರಿಗೆ ಹೋದೆ" ಎನ್ನುತ್ತಾರೆ ಅಮೀರ್ ಜಾನ್. 

ಒಂದು ದಿನದ ತರಬೇತಿಯ ಬಳಿಕ ಅಮೀರ್ ಜಾನ್ ಕರ್ತವ್ಯ ಶುರುವಾಯಿತು. ಮಾರ್ಚ್ 30 ಕ್ಕೆ ಮೊದಲ ಕರೆ ಬಂತು. " 65 ವರ್ಷದ ಅನಾರೋಗ್ಯಪೀಡಿತ ವ್ಯಕ್ತಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಿಂದ ಸಾಗಿಸಬೇಕಿತ್ತು. ಆದರೆ ಸೋಂಕಿನ ಭಯದಿಂದ ಯಾರೂ ಸಹಾಯಕ್ಕೆ ಬರುತ್ತಿರಲಿಲ್ಲ. ಕೊನೆಗೆ ಪ್ಯಾರಾ ಮೆಡಿಕ್ ಸಿಬ್ಬಂದಿಗಳು ಮತ್ತು ನಾನು ಅವರನ್ನು ಆಂಬುಲೆನ್ಸ್ ಗೆ ತಂದು ವಿಕ್ಟೊರಿಯಾ ಆಸ್ಪತ್ರೆಗೆ ಸಾಗಿಸಿದೆವು" ಎನ್ನುತ್ತಾರೆ ಅಮೀರ್ ಜಾನ್. 

ಅಮೀರ್ ಗೆ ಪ್ರತಿದಿನ ಮನೆಗೆ ಹೋಗಲು ಸಾಧ್ಯವಿಲ್ಲ. ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯಲ್ಲಿ ಒದಗಿಸಲಾಗಿರುವ ಕೊಠಡಿಯಲ್ಲಿ ಅವರೀಗ ಉಳಿದುಕೊಳ್ಳುತ್ತಿದ್ದಾರೆ. "ಮಾರ್ಚ್ 28 ರಿಂದ ನಾನು ಇಲ್ಲೇ ಇದ್ದೇನೆ. ನಮ್ಮ ಊರಿನ ಜನರು ನಾನು ಸಂಪೂರ್ಣ ವೈರಸ್ ಮುಕ್ತ ಎಂದು ಖಚಿತ ಆಗುವವರೆಗೆ ಊರಿಗೆ ಬರಬೇಡ ಎಂದು ಹೇಳಿದ್ದಾರೆ. ನಾನು ಈಗ ವಿಡಿಯೋ ಕಾಲ್ ಮೂಲಕ ಮನೆಯವರೊಂದಿಗೆ ಸಂಪರ್ಕದಲ್ಲಿದ್ದೇನೆ " ಎಂದು ಅಮೀರ್ ಹೇಳಿದ್ದಾರೆ. 

ಅಮೀರ್ ಮಾಡುತ್ತಿರುವ ಕೆಲಸ ಸಾಹಸಮಯ ಮಾತ್ರವಲ್ಲ ತೀವ್ರ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಒಮ್ಮೆ ಒಂದು ಕುಟುಂಬದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರ ಸಹಿತ ಏಳು ಮಂದಿಯನ್ನು ಆಸ್ಪತ್ರೆಗೆ ಸಾಗಿಸಬೇಕಾಯಿತು. "ಅವರು ಆಸ್ಪತ್ರೆ ತಲುಪುವವರೆಗೂ ಅವರ ಫಲಿತಾಂಶ ನೆಗೆಟಿವ್ ಬರಲಿ ಎಂದೇ ಪ್ರಾರ್ಥಿಸುತ್ತಿದ್ದೆ" ಎನ್ನುತ್ತಾರೆ ಅಮೀರ್. ಅವರ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News