ರಮಝಾನ್ ತಿಂಗಳಲ್ಲಿಯೂ ಲಾಕ್‍ಡೌನ್ ಕಡ್ಡಾಯವಾಗಿ ಪಾಲಿಸಿ: ಅಮೀರೆ ಶರೀಅತ್ ಸಗೀರ್ ಅಹ್ಮದ್ ರಶಾದಿ

Update: 2020-04-14 16:32 GMT

ಬೆಂಗಳೂರು, ಎ.14: ರಮಝಾನ್ ತಿಂಗಳಲ್ಲಿಯೂ ಲಾಕ್‍ಡೌನ್ ಅನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಕರೆ ನೀಡಿದ್ದಾರೆ.

ಮಂಗಳವಾರ ನಗರದ ದಾರೂಲ್ ಉಲೂಮ್ ಸಬೀಲುರ್ರಶಾದ್ (ಅರೇಬಿಕ್ ಕಾಲೇಜು)ನಲ್ಲಿ ನಡೆದ ಇಮಾರತ್-ಎ-ಶರೀಅ ಮುಖಂಡರ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಮಝಾನ್ ನ ಉಪವಾಸಗಳನ್ನು ಸಕಾರಣವಿಲ್ಲದೆ ಬಿಡಬಾರದು. ಈಗಾಗಲೆ ತಿಳಿಸಿರುವಂತೆ ಮಸೀದಿಗಳಿಗೆ ತೆರಳದೆ ಪ್ರತಿ ದಿನದ ಐದು ಹೊತ್ತಿನ ನಮಾಝ್ ಅನ್ನು ಮನೆಯಲ್ಲಿ ನಿರ್ವಹಿಸಬೇಕು. ಅಲ್ಲದೆ, ತರಾವೀಹ್ ನಮಾಝ್ ಅನ್ನು ಕುಟುಂಬ ಸದಸ್ಯರು ಸೇರಿ ಮನೆಯಲ್ಲಿಯೇ ನಿರ್ವಹಿಸಬೇಕು ಎಂದು ಅವರು ಹೇಳಿದರು.

ರಮಝಾನ್ ಸಂದರ್ಭದಲ್ಲಿ ಹೊರಗೆ ತಿರುಗಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿ. ಲಾಕ್‍ಡೌನ್ ಮುಗಿಯುವವರೆಗೆ ಲೌಡ್‍ ಸ್ಪೀಕರ್(ಧ್ವನಿವರ್ಧಕ) ಬಳಸಿ ಜನರನ್ನು ಸಹರಿಗಾಗಿ ಎಚ್ಚರಗೊಳಿಸುವುದನ್ನು ಕೈಬಿಡಬೇಕು. ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ವಿಚಾರದಲ್ಲಿ ಸರಕಾರ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು ಎಂದು ಅವರು ತಿಳಿಸಿದರು. ಈ ಹಿಂದಿನಂತೆ ಮುಅಝ್ಝಿನ್ ಅಥವಾ ಇಮಾಮ್ ರಮಝಾನ್ ತಿಂಗಳಲ್ಲಿ ಸಹರಿ ಸಮಯ ಮುಕ್ತಾಯಗೊಳ್ಳುವ ಹಾಗೂ ಇಫ್ತಾರ್ ಸಮಯ ಆರಂಭಗೊಳ್ಳುವ ಸೂಚನೆಯನ್ನು ನೀಡಬಹುದಾಗಿದೆ ಎಂದು ಅವರು ಹೇಳಿದರು.

ಸಹರಿ ಹಾಗೂ ಇಫ್ತಾರ್ ಕೂಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ. ರಮಝಾನ್ ಮಾಸದಲ್ಲಿ ಬಡವರು, ಅಗತ್ಯ ಇರುವವರಿಗೆ ನೆರವು ನೀಡಿ. ಝಕಾತ್ ಹಾಗೂ ಸದಖಾ ಮೂಲಕ ನಿಮ್ಮ ಸಂಬಂಧಿಕರು, ನೆರೆಹೊರೆಯವರು ಹಾಗೂ ನೆರವಿನ ಅಗತ್ಯ ಇರುವಂತಹ ಮುಸ್ಲಿಮೇತರ ಸಹೋದರರಿಗೂ ನೆರವು ನೀಡಿ ಎಂದು ಅಮೀರೆ ಶರೀಅತ್ ತಿಳಿಸಿದರು.

ಇಫ್ತಾರ್, ತಹಜ್ಜುದ್ ಸಂದರ್ಭದಲ್ಲಿ ನಮ್ಮ ದೇಶ, ಮಾನವ ಕುಲ ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬರುವಂತೆ ಪ್ರತಿಯೊಬ್ಬರೂ ಪ್ರಾರ್ಥನೆ ಮಾಡಬೇಕು. ನಮ್ಮ ದೇಶ ಹಾಗೂ ಸಮುದಾಯಕ್ಕೆ ಸಮಸ್ಯೆಯನ್ನುಂಟು ಮಾಡುವಂತಹ ಯಾವುದೇ ಬಗೆಯ ಚಟುವಟಿಕೆಗಳನ್ನು ಮಕ್ಕಳು ಅಥವಾ ಯುವಕರು ಸೇರಿದಂತೆ ಯಾರೂ ಮಾಡದಂತೆ ಪೋಷಕರು, ಕುಟುಂಬದ ಜವಾಬ್ದಾರಿಯುತ ಸದಸ್ಯರು ಗಮನ ಹರಿಸಬೇಕು ಎಂದು ಅವರು ಸೂಚಿಸಿದರು.

ಪ್ರಮುಖವಾಗಿ ಯುವಕರು ದ್ವಿಚಕ್ರ ವಾಹನ, ಕಾರುಗಳು ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾತ್ರಿ ಹೊತ್ತು ಅನಗತ್ಯವಾಗಿ ತಿರುಗಾಡುವುದು, ವೀಲಿಂಗ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ವಿಶೇಷ ಮನವಿ: ಮದ್ರಸಾಗಳು ನಮ್ಮ ಧರ್ಮ ಹಾಗೂ ಸಮುದಾಯದ ಆಸ್ತಿ. ಅವುಗಳನ್ನು ಉಳಿಸಿ ಮುಂದುವರೆಸುವುದು ನಮ್ಮ ಜವಾಬ್ದಾರಿ. ಆದುದರಿಂದ, ಈ ಹಿಂದೆ ನೀಡುತ್ತಿದ್ದಂತೆ ನಿಮ್ಮ ನೆರವನ್ನು ಮದ್ರಸಾಗಳಿಗೆ ನೀಡಿ ಎಂದು ಸಗೀರ್ ಅಹ್ಮದ್ ತಿಳಿಸಿದರು.

ಮಸ್ಜಿದ್ ಹಾಗೂ ಮದ್ರಸಾಗಳ ಮುಖ್ಯಸ್ಥರು, ತಮ್ಮ ಸಂಸ್ಥೆಗಳ ಇಮಾಮ್, ಮುಅಝ್ಝಿನ್, ಶಿಕ್ಷಕರು, ಸಹಾಯಕ ಸಿಬ್ಬಂದಿಗಳ ಹಿತವನ್ನು ಕಾಪಾಡಬೇಕು. ಅವರ ವೇತನಗಳಲ್ಲಿ ಯಾವುದೇ ರೀತಿಯ ಕಡಿತವನ್ನು ಮಾಡಬಾರದು. ಸ್ಥಳೀಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಮಸೀದಿಗಳಿಗೆ ಈ ಹಿಂದಿನಂತೆಯೆ ತಮ್ಮ ನೆರವನ್ನು ನೀಡಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಸಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News