×
Ad

ಕೊರೋನದಿಂದಲ್ಲ, ಅಲೆಮಾರಿಗಳು ಹಸಿವಿನಿಂದ ಸಾಯುತ್ತಾರೆ: ಡಾ.ಸಿ.ಎಸ್.ದ್ವಾರಕನಾಥ್

Update: 2020-04-14 23:58 IST

ಬೆಂಗಳೂರು, ಎ.14: ಭೀಕರ ಕೊರೋನ ರೋಗವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಿಯಂತ್ರಿಸುತ್ತಿರುವುದು ಹಾಗೂ ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ದುಡಿಯಲು ಕೆಲಸವಿಲ್ಲದ ದಿನಗೂಲಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ತಾವು ನೀಡುತ್ತಿರುವ ಸಕಾಲಿಕ ನೆರವಿಗೆ, ತಮ್ಮ ಕಾಳಜಿಗೆ ಮೊದಲು ಕೃತಜ್ಞತೆ ಹೇಳುತ್ತಿದ್ದೇವೆ ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

ಸರಕಾರ ಊರು, ಕೇರಿಗಳಲ್ಲಿರುವ ಎಲ್ಲ ಬಡವರಿಗೆ ಸಹಾಯ ನೀಡುತ್ತಿದೆ. ಆದರೆ, ನಮ್ಮ ಅಲೆಮಾರಿಗಳು ಊರಾಚೆಯ ಸ್ಮಶಾನದಲ್ಲಿ, ಪಾಳು ಮಂಟಪಗಳಲ್ಲಿ, ರೈಲ್ವೆ ಹಳಿಗಳ ಬಳಿ ಹಳೆಯ ಬಟ್ಟೆಯ ಟೆಂಟು, ಗುಡಾರಗಳನ್ನು ಹಾಕಿಕೊಂಡು ಬದುಕುವುದರಿಂದ ಇವರು ಯಾವ ಅಧಿಕಾರಿ, ಪ್ರತಿನಿಧಿಗಳ ಕಣ್ಣಿಗೆ ಸಾಮಾನ್ಯವಾಗಿ ಕಾಣುತ್ತಿಲ್ಲ. ಈ ಕಾರಣಕ್ಕೆ ಇವರು ನೀವು ನೀಡುವ ನೆರವಿನಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಹುತೇಕ ಅಲೆಮಾರಿಗಳು ತಮ್ಮ ಕುಲಪ್ರವೃತ್ತಿಗಳಾದ ಹಾಡು, ನಾಟಕ, ಹಗಲುವೇಷ, ತೊಗಲು ಗೊಂಬೆಯಾಟ, ಗಾರುಡಿ, ಕಸರತ್ತಿನ ಕಲೆ, ದೊಂಬರಾಟ, ನಾಟಿಮದ್ದು ಮಾರುವುದು, ಕಿವಿಯಲ್ಲಿ ಗುಗ್ಗೆ ತೆಗೆಯುವುದೆ ಮುಂತಾದ ವೈದ್ಯ, ಆಟ, ಪ್ರದರ್ಶನ ಕಲೆಗಳ ಸೇವೆ ಮಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಅಲೆಯುತ್ತಿರುತ್ತಾರೆ. ಈ ಕಾರಣಕ್ಕೆ ಇವರಲ್ಲಿ ಬಹುತೇಕರ ಬಳಿ ರೇಷನ್‍ ಕಾರ್ಡು, ಆಧಾರ್ ಕಾರ್ಡು ಮುಂತಾದ ದಾಖಲಾತಿಗಳಿರುವುದಿಲ್ಲ ಎಂದು ದ್ವಾರಕನಾಥ್ ತಿಳಿಸಿದ್ದಾರೆ.

ಇದೀಗ ರೇಷನ್ ಕಾರ್ಡು ಇರುವ ಕೆಲವರಿಗೆ ತಮ್ಮ ನೆರವು ಸಿಕ್ಕಿದ್ದಕ್ಕಾಗಿ ತಮಗೆ ಕೃತಜ್ಞರಾಗಿದ್ದೇವೆ. ಆದರೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲದವರದ್ದೆ ಸಮಸ್ಯೆ. ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆಯ ಕಾರ್ಯಕರ್ತರು ಅಲ್ಲಲ್ಲಿ ತಮ್ಮ ಅಧಿಕಾರಿಗಳನ್ನು ಕೇಳಿಕೊಂಡ ಕಾರಣ, ಹಾಗೂ ನಾನೂ ವೈಯಕ್ತಿಕವಾಗಿ ಆಯಾ ಪ್ರದೇಶದ ಅಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡ ಕಾರಣಕ್ಕೆ ಕೆಲವು ಕಡೆ ದಾನಿಗಳಿಂದ ಸ್ವಲ್ಪ ಪ್ರಮಾಣದ ನೆರವು, ಆ ಹೊತ್ತಿನ ಊಟ ಕೊಡಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ತಾವು ಮತ್ತು ತಮ್ಮ ಸರಕಾರದ ಪ್ರತಿನಿಧಿಗಳು ರೇಷನ್ ಕಾರ್ಡು ಇಲ್ಲದವರಿಗೂ ನೆರವು ನೀಡುತ್ತೇವೆಂದು ಹೇಳುತ್ತಿದ್ದೀರಿ. ಈ ಬಗ್ಗೆ ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ‘ನಮಗೆ ಬರಹದಲ್ಲಿ ಯಾವುದೇ ಆದೇಶ ಬಂದಿಲ್ಲ’ ಎನ್ನುತ್ತಿದ್ದಾರೆ. ಇದರಿಂದಾಗಿ, ರೇಷನ್ ಕಾರ್ಡು ಇಲ್ಲದ ನಮ್ಮ ಅಲೆಮಾರಿಗಳು ಮಕ್ಕಳು, ಮಹಿಳೆಯರು, ವೃದ್ಧರೊಂದಿಗೆ ದಿಕ್ಕುತೋಚದಂತಾಗಿ ಹಸಿವಿನಿಂದ ನರಳುತ್ತಿದ್ದಾರೆ ಎಂದು ದ್ವಾರಕನಾಥ್ ತಿಳಿಸಿದ್ದಾರೆ.

ಈ ಕಾರಣಕ್ಕಾಗಿ ತಾವು ದೊಡ್ಡ ಮನಸ್ಸು ಮಾಡಿ ತಮ್ಮ ಅಧಿಕಾರಿಗಳಿಗೆ ತಕ್ಷಣ ಒಂದು ಲಿಖಿತ ಆದೇಶ ನೀಡಬೇಕು. ಇದೀಗ ಕೊರೋನದಿಂದ ಹಸಿದ ಅಲೆಮಾರಿಗಳಿಗೆ ಸರಕಾರವು ರೇಷನ್ ಕಾರ್ಡು ಇದ್ದವರಿಗೆ ಮಾತ್ರ ಕೇವಲ 10 ಕೆಜಿ ಅಕ್ಕಿ, 2 ಕೆಜಿ ಗೋದಿಯನ್ನು ಹಂಚಿದೆ. ಈ ಎರಡು ಧಾನ್ಯಗಳಿಂದ ಅಡುಗೆಯನ್ನು ಮಾಡಲು ಸಾಧ್ಯವೇ ಸರ್ ? ಕಾರ್ಡು ಇಲ್ಲದ ಶೇ.50ಕ್ಕೂ ಅಧಿಕ ಕುಟುಂಬಗಳಿಗೆ ಇದು ಸಹ ಇಲ್ಲ. ಅವರು ಹೇಗೆ ಬದುಕಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

ಲಾಕ್‍ಡೌನ್ ಅನ್ನು ಮೇ 3ರವರೆಗೆ ಮುಂದುವರೆಸಿ ಪ್ರಧಾನಿ ಆದೇಶಿಸಿದ್ದಾರೆ. ಇದೀಗ ಅಲೆಮಾರಿಗಳು ಊರು, ಕೇರಿ ಸುತ್ತಿ ತಮ್ಮ ಕುಲವೃತ್ತಿ ಮಾಡಲಾರರು. ಹಳ್ಳಿ, ವಾಡೆ ಸುತ್ತಿ ಕೂದಲು, ಚೌರ, ಪಿನ್, ಸೂಜಿ, ಸ್ಟಿಕರ್, ಬಲೂನು ಮಾರಲಾರರು. ಕೊಡೆ ರಿಪೇರಿ, ಬೀಗ ರಿಪೇರಿ ಮಾಡಲಾರರು. ಅವರು ಬೀದಿಗೆ ಬಂದರೆ ಪೊಲೀಸರು ಮೂಳೆ ಮುರಿಯುತ್ತಾರೆ. ಅವರ ಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಕೊರೋನದಿಂದಲ್ಲ, ಅಲೆಮಾರಿಗಳು ಹಸಿವಿನಿಂದ ಸಾಯುತ್ತಾರೆ. ಇದು ಖಚಿತ ಎಂದು ದ್ವಾರಕನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷ ಪ್ಯಾಕೇಜ್: ರಾಜ್ಯ ಸರಕಾರ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಎಲ್ಲ ಅಲೆಮಾರಿಗಳಿಗೂ ಯಾವುದೇ ದಾಖಲೆಗಳನ್ನು ಮಾನದಂಡವಾಗಿ ಪರಿಗಣಿಸದೆ ‘ವಿಶೇಷ ಪ್ಯಾಕೇಜ್’ ಘೋಷಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

10 ಕೆಜಿ ಅಕ್ಕಿ, 3 ಕೆಜಿ ಬೇಳೆ ಹಾಗೂ ಇತರೆ ಕಾಳುಗಳು, 5 ಕೆಜಿ ರಾಗಿ ಹಿಟ್ಟು, 3 ಕೆಜಿ ಗೋಧಿ ಹಿಟ್ಟು, 3 ಕೆಜಿ ರವೆ, 3 ಕೆಜಿ ಅವಲಕ್ಕಿ, 500 ಗ್ರಾಂ ಮಸಾಲೆ ಪುಡಿ, 2 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು, 500 ಗ್ರಾಂ ಸಾಂಬಾರ್ ಪದಾರ್ಥಗಳು, 5 ಕೆಜಿ ತರಕಾರಿ, 4 ಮೈ ಸೋಪು, 6 ಬಟ್ಟೆ ತೊಳೆಯುವ ಸೋಪು, 50 ಮೇಣದ ಬತ್ತಿ(ಒಂದು ಕುಟುಂಬಕ್ಕೆ), 5 ಬೆಂಕಿ ಪೊಟ್ಟಣ, 100 ಗ್ರಾಂ ಕೊಬ್ಬರಿ ಎಣ್ಣೆ ನೀಡಬೇಕು ಎಂದು ಅವರು ಪಟ್ಟಿಯನ್ನು ನೀಡಿದ್ದಾರೆ.

ಅಲೆಮಾರಿಗಳಿಗಾಗಿಯೆ ಮೀಸಲಿಟ್ಟ ಅತ್ಯಂತ ಕಡಿಮೆ ಹಣವನ್ನು ಸ್ಥಳೀಯ ಜಿಲ್ಲಾ ಆಡಳಿತದಿಂದಾಗಲಿ, ರಾಜ್ಯ ಅಲೆಮಾರಿ ಕೋಶದಲ್ಲಿ ಲಭ್ಯವಿರುವ ನಿಧಿಯಿಂದಾಗಲಿ, ರಾಜ್ಯ ಓಬಿಸಿ ನಿಗಮದಿಂದಾಗಲಿ, ಸಮಾಜ ಕಲ್ಯಾಣ ಇಲಾಖೆಯಿಂದಾಗಲಿ, ರಾಷ್ಟ್ರೀಯ ಅಲೆಮಾರಿ ಅಭಿವೃದ್ಧಿ ನಿಗಮದ ನಿಧಿಯಿಂದ(ರಾಜ್ಯದ ಪಾಲಿನಿಂದ), ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದಾಗಲಿ ಹೊಂದಿಸಬಹುದು ಎಂದು ದ್ವಾರಕನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News