ಲಾಕ್‍ಡೌನ್ ಮಧ್ಯೆ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರ ಸೇವೆ ಸ್ಮರಣೀಯ: ಸಚಿವ ಸಿ.ಟಿ.ರವಿ

Update: 2020-04-16 12:48 GMT

ಚಿಕ್ಕಮಗಳೂರು, ಎ.16: ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ತಡೆಯಲು ಹಾಗೂ ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸಲು ವೈದ್ಯರು, ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಶಾ ಕಾರ್ಯಕರ್ತರು, ಛಾಯಾಗ್ರಾಹಕರು ಮತ್ತು ಪತ್ರಿಕಾ ವಿತರಕರಿಗೆ ಆಹಾರ ಧಾನ್ಯದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಹರಡದಂತೆ ಎಚ್ಚರಿಕೆ ವಹಿಸಿ ಆರಂಭದ ದಿನದಿಂದಲೂ ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಕಾರ ನೀಡುವ ಗೌರವ ಧನ ನಾಲ್ಕು ಸಾವಿರ ರೂ. ಮಾತ್ರ. ಈ ವೇತನ ಅವರ ಸಂಸಾರಕ್ಕೆ ಸಾಲುವುದಿಲ್ಲ. ಕೆಲಸದ ಒತ್ತಡದಿಂದಾಗಿ ಬೇರೆ ಕೆಲಸವನ್ನೂ ಮಾಡಲಾಗುವುದಿಲ್ಲ. ಕುಟುಂಬ ನಿರ್ವಹಣೆಯೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಅವರ ನೆರವಿಗೆ ಬರಬೇಕಾದುದು ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ ಧರ್ಮವಾಗಿದೆ ಎಂದರು.

ಆಶಾ ಕಾರ್ಯಕರ್ತರು, ಬಡ ಛಾಯಾಗ್ರಾಹಕರು, ಪತ್ರಿಕಾ ವಿತರಿಕರಿಗೆ ಆಹಾರ ಧಾನ್ಯ ಕೊಡಲಾಗುತ್ತಿದೆ. ಗ್ರಾಮಾಂತರ ಭಾಗದ ಆಟೊ ಮತ್ತು ಗೂಡ್ಸ್ ವಾಹನ ಚಾಲಕರು, ಇಸ್ತ್ರಿ ಅಂಗಡಿಯವರು ಸೇರಿದಂತೆ ಬದುಕು ಕಷ್ಟವಾಗಿರುವವರ ನೆರವಿಗೆ ಬರುವ ಕೆಲಸವನ್ನು ಸಂಘ ಸಂಸ್ಥೆಗಳೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಗರ ಹಾಗೂ ಗ್ರಾಂತರ ಪ್ರದೇಶಕ್ಕೆ ವಿತರಿಸಲು ಸಕ್ಕರೆ,ಬೇಳೆ,ಎಣ್ಣೆ ಹಾಗೂ ವಿವಿಧ ಆಹಾರಧಾನ್ಯವನ್ನು ಸಚಿವ ಸಿ.ಟಿ.ರವಿ ಕಾರ್ಯಕರ್ತರೊಂದಿಗೆ ಕುಳಿತು ಪ್ಯಾಕೆಟ್ ಮಾಡಲು ಸಹಕರಿಸಿದರು. ಡಿಹೆಚ್‍ಒ ಉಮೇಶ್, ಡಾ.ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಸೀತಾರಾಂ ಭರಣ್ಯ, ಮಂಜು, ಕುರುವಂಗಿ ವೆಂಕಟೇಶ್, ಹಿರೇಮಗಳೂರು ಕೇಶವ, ನಾರಾಯಣ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News