ಚಿಕ್ಕಮಗಳೂರು: ವಸ್ತಾರೆ ಗ್ರಾಪಂನಿಂದ ನಾಲ್ಕು ಸಾವಿರ ಮಾಸ್ಕ್ ವಿತರಣೆ

Update: 2020-04-16 16:10 GMT

ಚಿಕ್ಕಮಗಳೂರು, ಎ.16: ಕೊರೋನಾ ಭೀತಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ವಸ್ತಾರೆ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮಸ್ಥರಿಗೆ ನಾಲ್ಕು ಸಾವಿರ ಮಾಸ್ಕ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ವಸ್ತಾರೆ ಗ್ರಾಪಂ ಅಧ್ಯಕ್ಷ ವಿ.ಪಿ.ರವಿ ತಿಳಿಸಿದರು.

ಪಂಚಾಯತ್ ವ್ಯಾಪ್ತಿಯ ಆಲದಗುಡ್ಡೆ ಸೇರಿದಂತೆ ಇತರ ಗ್ರಾಮಗಳಿಗೆ ಗ್ರಾಪಂ ಸದಸ್ಯರೊಂದಿಗೆ ತೆರಳಿ ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಿದ ನಂತರ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆ ನಿತ್ಯ ಸೋಪಿನಿಂದ ಕೈತೊಳೆದು ಊಟ-ಉಪಹಾರಗಳನ್ನು ಸೇವಿಸಬೇಕಿದೆ. ಕೋವಿಡ್-19 ಸೋಂಕು ತಡೆಗೆ ಮಾಸ್ಕ್ ಗಳನ್ನು ಧರಿಸುವುದನ್ನು ಆರೋಗ್ಯ ಇಲಾಖೆ ಕಡ್ಡಾಯ ಮಾಡಿದ್ದು, ಮಾಸ್ಕ್ ಗಳ ಕೊರತೆ ಇದೆ. ಅಲ್ಲದೇ ಮಾರುಕಟ್ಟೆಯಲಿ ಮಾಸ್ಕ್ ಗಳ ಬೆಲೆ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ಜನರಿಗೆ ಪಂಚಾಯತ್ ವತಿಯಿಂದಲೇ ಮಾಸ್ಕ್ ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಈ ಮೊದಲೆ ಮಾಸ್ಕ್ ಗಳನ್ನು ವಿತರಿಸಬೇಕೆಂದು ಚರ್ಚೆ ನಡೆಸಲಾಗಿತ್ತು. ಆದರೆ ಮಾಸ್ಕ್ ಗಳ ಲಬ್ಯತೆ ಇರಲಿಲ್ಲ. ಲಾಕ್‍ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ನಾಲ್ಕು ಸಾವಿರ ಮಾಸ್ಕ್ ಗಳನ್ನು ತಯಾರಿಸಿ ಗ್ರಾಮಸ್ಥರಿಗೆ ವಿತರಿಸಲಾಗುತ್ತಿದೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ 3500ಕ್ಕೂ ಹೆಚ್ಚು ಪಡಿತರ ಚೀಟಿದಾರರ ಕುಟುಂಬಗಳಿದ್ದು, ಎಲ್ಲರಿಗೂ ಮಾಸ್ಕ್ ಗಳನ್ನು ವಿತರಣೆ ಮಾಡಲಾಗುವುದು ಎಂದ ಅವರು, ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಯ್ದಕೊಳ್ಳುವುದು, ಸಮರ್ಪಕ ನೀರು ಪೂರೈಕೆ, ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆರೋಗ್ಯ ಜಾಗೃತಿ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು, ಆರೋಗ್ಯ ಸಹಾಯಕಿಯರ , ಆಶಾ ಕಾರ್ಯಕರ್ತರನ್ನು ಕರೆಸಿ ಪ್ರತಿವಾರ ಸಭೆ ಮಾಡಿ, ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಸೋಮಶೇಖರ್, ರವಿಕುಮಾರ್, ಲಲಿತಾ, ಪಾರ್ವತಮ್ಮ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News