ಸ್ಯಾನಿಟೈಸರ್ ಸೇವನೆಯಿಂದ ಬಹು ಅಂಗಾಂಗ ವೈಫಲ್ಯ: ಆರೋಗ್ಯ ಇಲಾಖೆ ಎಚ್ಚರಿಕೆ

Update: 2020-04-16 17:37 GMT
ಸಾಂದರ್ಭಿಕ ಚಿತ್ರ

ಧಾರವಾಡ, ಎ.16: ಹುಬ್ಬಳ್ಳಿಯಲ್ಲಿ ಕೆಲವು ಯುವಕರು ಮತ್ತು ವ್ಯಕ್ತಿಗಳು ಸ್ಯಾನಿಟೈಸರ್ ಗಳನ್ನು ಸೇವಿಸುತ್ತಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಕೊರೋನ ನಿಯಂತ್ರಣಕ್ಕಾಗಿ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಗಳು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಕಾರಣಕ್ಕೂ ಸೇವನೆಗೆ ಯೋಗ್ಯವಲ್ಲ. ಇದರಿಂದ ಲಿವರ್ ಮತ್ತು ಬಹು ಅಂಗಾಂಗಗಳ ವೈಫಲ್ಯವಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಚ್ಚರಿಕೆ ನೀಡಿದೆ.

ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಮಾತ್ರ ಇರುವುದಿಲ್ಲ. ಇದು ಶೇ.95ರಷ್ಟು ಇಥೈಲ್ ಆಲ್ಕೋಹಾಲ್, ಶೇ.0.125 ಹೈಡ್ರೋಜನ್ ಪೆರಾಕ್ಸೈಡ್, ಶೇ.1.45ರಷ್ಟು ಗಿಸ್ಲರಾಲ್ ಒಳಗೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇಥೆನಾಲ್ ಇರುವುದರಿಂದ ಕುಡಿಯಲು ಇದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಇದರ ಸೇವನೆಯಿಂದ ಅನ್ನನಾಳ, ಜಠರ, ಸಣ್ಣ ಕರಳು, ದೊಡ್ಡಕರಳು, ಪಿತ್ತಜನಕಾಂಗ(ಲೀವರ್) ಮತ್ತು ಮೇದೋಜಿರಕ ಗ್ರಂಥಿಗಳಿಗೆ ತೀವ್ರವಾದ ಹಾನಿಯಾಗುತ್ತದೆ. ಪ್ರಾಣಹಾನಿಯಾಗುವ ಸಾಧ್ಯತೆಗಳು ಇರುತ್ತವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ ತಿಳಿಸಿದ್ದಾರೆ.

ಸ್ಯಾನಿಟೈಸರ್ ಹೊಟ್ಟೆಯಲ್ಲಿ ಹೋದರೆ ಅನ್ನನಾಳ ತೂತು ಬೀಳುತ್ತೆ, ಲೀವರ್ ಗಳ ಕ್ರಿಯೆಗೂ ಧಕ್ಕೆ ಬರುತ್ತದೆ. ಮನುಷ್ಯ ಸಾಯುವ ಪರಿಸ್ಥಿತಿ ಬರಬಹುದು. ಆದುದರಿಂದ, ಸ್ಯಾನಿಟೈಸರ್ ಸೇವಿಸಬಾರದು. ಇದು ಕುಡಿಯುವ ವಸ್ತು ಅಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಸ್ಯಾನಿಟೈಸರ್ ಸೇವನೆ ಮಾಡುತ್ತಿರುವವರ ಬಗ್ಗೆ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077 ಅಥವಾ ವಾಟ್ಸಪ್ ಸಂಖ್ಯೆಗಳಾದ 94498 47646, 94498 47641ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News