ಕಲಬುರಗಿಯಲ್ಲಿ ಲಾಕ್ಡೌನ್ ಉಲ್ಲಂಘಿಸಿ ಜಾತ್ರೆ: 150 ಮಂದಿ ವಿರುದ್ಧ ಪ್ರಕರಣ ದಾಖಲು, ಐವರ ಬಂಧನ
ಕಲಬುರಗಿ, ಎ.16: ಲಾಕ್ ಡೌನ್ ಉಲ್ಲಂಘಿಸಿ ಜಾತ್ರಾ ಮಹೋತ್ಸವ ನಡೆಸಿದ ಆರೋಪದ ಮೇರೆಗೆ ರಥೋತ್ಸವದಲ್ಲಿ ಭಾಗಿಯಾಗಿದ್ದ ಸುಮಾರು 150 ಜನರ ಮೇಲೆ ಕೇಸ್ ದಾಖಲಿಸಲಾಗಿದ್ದು, ಐವರನ್ನು ಬಂಧಿಸಲಾಗಿದೆ.
ತಾಲೂಕಿನ ವಾಡಿ ಪಟ್ಟಣದ ಸಮೀಪ ಇರುವ ರಾವೂರ ಗ್ರಾಮದಲ್ಲಿ ಇಂದು ಬೆಳಗ್ಗೆ ಲಾಕ್ ಡೌನ್ ಉಲ್ಲಂಘಿಸಿ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಸುಮಾರು 150 ಮಂದಿ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
"ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ರಥೋತ್ಸವದಲ್ಲಿ ಪಾಲ್ಗೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರಾದ ರಮೇಶ್ ಕೋಲಾರ್ ತಿಳಿಸಿದ್ದಾರೆ.
ಈ ವೇಳೆಯಲ್ಲಿ ತಹಶೀಲ್ದಾರ್ ಉಮಾಕಾಂತ್ ಹಳ್ಳೆ, ತಾಲೂಕು ಡಿವೈಎಸ್ಪಿ ವೆಂಕನಗೌಡ ಪಾಟೀಲ್, ಪಂಚಾಯತ್ ಇಓ ಅನಿತಾ ಪೂಜಾರಿ, ಪಶು ವೈದ್ಯಾಧಿಕಾರಿ ಬಸಲಿಂಗಪ್ಪ ಡಿಗ್ಗಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ರಾಮ ಸೇರಿದಂತೆ ಇತರರು ಇದ್ದರು.