×
Ad

ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಸ್ವಾಬ್ ಸಂಗ್ರಹ ಬೂತ್ ಕಾರ್ಯಾರಂಭ

Update: 2020-04-17 14:45 IST

ಶಿವಮೊಗ್ಗ, ಎ.17: ಕೊರೋನ ವೈರಸ್ ತಪಾಸಣೆಗಾಗಿ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ನೀಡಲಾಗಿರುವ ಗಂಟಲ ದ್ರವ (ಸ್ವಾಬ್) ಸಂಗ್ರಹಿಸುವ 2 ಬೂತ್‍ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ಬರಪ್ಪ ಶುಕ್ರವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬೂತ್ ಮೂಲಕ ಸ್ವಾಬ್ ಸಂಗ್ರಹಿಸುವುದರಿಂದ ವೈದ್ಯರ ಸುರಕ್ಷತೆ ಪ್ರಮಾಣ ಹೆಚ್ಚಾಗುತ್ತದೆ. ಸ್ವಾಬ್ ಸಂಗ್ರಹಿಸುವ ಪ್ರಮಾಣವನ್ನು ಹೆಚ್ಚಿಸಲು ಇದರಿಂದ ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ.ರಘುನಂದನ್ ಮಾಹಿತಿ ನೀಡಿ, ಬೂತ್ ಮೂಲಕ ತ್ವರಿತಗತಿಯಲ್ಲಿ ಸ್ವಾಬ್ ಸಂಗ್ರಹ ಸಾಧ್ಯವಿದೆ. ದಿನನಿತ್ಯ 60ರವರೆಗೆ ಸ್ವಾಬ್ ಸಂಗ್ರಹ ಸಾಧ್ಯವಾಗಲಿದ್ದು, ಪ್ರಯೋಗಾಲಯದಲ್ಲಿ ಆರು ಗಂಟೆಯ ಒಳಗಾಗಿ ಫಲಿತಾಂಶ ಪಡೆಯಲು ಸಾಧ್ಯವಿದೆ. ಬೂತ್ ಮೂಲಕ ಸ್ವಾಬ್ ಸಂಗ್ರಹಿಸುವುದರಿಂದ ವೈದ್ಯರಿಗೆ ಹೆಚ್ಚಿನ ಸುರಕ್ಷತೆ ಲಭಿಸಲಿದ್ದು, ಜೀವ ರಕ್ಷಕ ಉಡುಗೆಯನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News