ನಡು ರಸ್ತೆಯಲ್ಲಿ ಬಡಿದಾಡಿದ ಆರೋಪ: ಅಬಕಾರಿ ಅಧಿಕಾರಿಗಳು ಅಮಾನತು
Update: 2020-04-17 16:20 IST
ಮಡಿಕೇರಿ ಎ.17: ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕೊಡಗು ಜಿಲ್ಲೆಯ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾತ್ರವಲ್ಲದೇ ಈ ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ತನಿಖೆ ನಡೆಸಲು ಕೂಡ ಸೂಚನೆ ನೀಡಲಾಗಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಚ್.ಎಸ್. ಶಿವಪ್ಪ ಮತ್ತು ಅಬಕಾರಿ ನಿರೀಕ್ಷಕ ಎಂ. ನಟರಾಜ್ ಎಂಬವರೇ ಅಮಾನತಾದ ಅಧಿಕಾರಿಗಳಾಗಿದ್ದಾರೆ ಎಂದು ಕೊಡಗು ಜಿಲ್ಲಾ ಅಬಕಾರಿ ಆಯುಕ್ತೆ ಬಿಂದುಶ್ರೀ ತಿಳಿಸಿದ್ದಾರೆ.