×
Ad

ಸೋಂಕಿತರ ಪರೀಕ್ಷೆಗೆ ಕೇರಳದ ಮಾದರಿ ಅನುಸರಿಸುವುದು ಸೂಕ್ತ: ಸಿದ್ದರಾಮಯ್ಯ

Update: 2020-04-17 17:02 IST

ಬೆಂಗಳೂರು, ಎ.17: ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಪರೀಕ್ಷೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ಸಂಬಂಧ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸೋಂಕು ಕಂಡು ಬಂದ ಸಂದರ್ಭದಲ್ಲೇ ಸರಕಾರ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ಬಗ್ಗೆ ನಮ್ಮ ಸಲಹೆಗಳನ್ನು ಸರಕಾರ ಸ್ವೀಕರಿಸಲಿಲ್ಲ. ವಿಧಾನ ಮಂಡಲ ಅಧಿವೇಶನ ಮುಂದೂಡಿ, ಸೋಂಕಿತರ ಬಗ್ಗೆ ಗಮನಹರಿಸಲು ಆಗ್ರಹಿಸಿದೆವು. ಸರಕಾರ ವಿಳಂಬ ಮಾಡಿದ್ದರಿಂದ ಈ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯಲ್ಲಿ ಚೀನಾದ ಕಂಟೈನರ್ ನಿಂದ ಕೊರೋನ ಸೋಂಕು ಬಂದಿದೆ ಎಂದು ಹೇಳಲಾಗಿತ್ತು. ಆದರೆ, ಪರೀಕ್ಷಾ ವರದಿಯಲ್ಲಿ ಅದು ದೃಢಪಟ್ಟಿಲ್ಲ. ಆರಂಭದಲ್ಲೆ ಸರಕಾರ ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿದ್ದರೆ ಸೋಂಕು ವೇಗವಾಗಿ ಹರಡುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಹಣ್ಣು-ತರಕಾರಿ ಬೆಳೆಯುತ್ತಿರುವ ರೈತರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಬೆಳೆದಿದ್ದನ್ನು ಖರೀದಿ ಮಾಡುವವರಿಲ್ಲ. ಅವರನ್ನು ಕೇಳುವವರಿಲ್ಲ. ಹೀಗಾಗಿ ರಾಜ್ಯ ಸರಕಾರವೇ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸಬೇಕೆಂದು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯ ಸರಕಾರ ಇನ್ನೂ ಕೊರೋನ ಸೋಂಕು ಪರೀಕ್ಷೆಗೆ ಪಿಪಿಇ ಕಿಟ್‍ಗಳನ್ನು ಇನ್ನೂ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಈ ಬಗ್ಗೆ ಸರಕಾರ ತುತ್ತಾಗಿ ಗಮನಹರಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಬೇಕು. ಜತೆಗೆ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಕೋರಿದರು.

ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ವಿಧಾನಸೌಧದ ನನ್ನ ಕಚೇರಿಯಲ್ಲಿ ಇಡೀ ದಿನ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಲಹೆ-ಸೂಚನೆ ನೀಡಿದ್ದೇನೆ
-ಸಿದ್ದರಾಮಯ್ಯ ವಿಪಕ್ಷ ನಾಯಕ

ಕೇರಳ ಮಾದರಿ ಸೂಕ್ತ
ಸೋಂಕಿತರ ಪರೀಕ್ಷೆಗೆ ಕೇರಳ ರಾಜ್ಯದ ಮಾದರಿ ಅನುಸರಿಸುವುದು ಸೂಕ್ತ. ವಿದೇಶದಿಂದ ಬಂದವರ ಸಂಖ್ಯೆ ಅಲ್ಲಿ ಹೆಚ್ಚಾಗಿತ್ತು. ಆದರೂ ಅಲ್ಲಿ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ನಮ್ಮಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸುವುದು ಸೂಕ್ತ.
-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News