×
Ad

ಬಳ್ಳಾರಿಯಲ್ಲಿ ಒಂದೇ ದಿನ 7 ಜನರಲ್ಲಿ ಕೋವಿಡ್-19 ದೃಢ

Update: 2020-04-17 17:12 IST
ಸಾಂದರ್ಭಿಕ ಚಿತ್ರ

ಬಳ್ಳಾರಿ, ಎ.17: ಕೊರೋನ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಾಗಿ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನಕ್ಕೆ 7 ಜನರಲ್ಲಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದು ಕಡಿಮೆಯೇ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ, ಇಂದು(ಎ.17) ಒಂದೇ ದಿನ 7 ಜನರಲ್ಲಿ ಕೊರೋನ ವೈರಸ್ ದೃಢಪಟ್ಟಿರುವುದರಿಂದ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದ್ದು, ಬಳ್ಳಾರಿಯ ಜನತೆಯಲ್ಲಿ ಆತಂಕ ಮೂಡಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಆರು ಜನರಲ್ಲಿ ಕೊರೋನ ಸೋಂಕು ಇರುವುದು ಪತ್ತೆಯಾಗಿತ್ತು. ಎ.16ರವರೆಗೆ ಬಳ್ಳಾರಿ ಜಿಲ್ಲೆಯಲ್ಲೂ ಅಷ್ಟೇ ಸಂಖ್ಯೆಯಲ್ಲಿ ಸೋಂಕಿತರು ಇದ್ದರು. ಆದರೂ ಜಿಲ್ಲೆಯನ್ನು ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಈಗ ದಿಢೀರನೆ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗಿರುವುದರಿಂದ ಹಾಟ್‍ಸ್ಪಾಟ್ ಜಿಲ್ಲೆಯನ್ನಾಗಿ ಘೋಷಿಸಬಹುದೆಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 7ರಿಂದ 11ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈಗ ಪ್ರಕರಣಗಳು ಏಕಾಏಕಿ ಹೆಚ್ಚಾಗಿದ್ದು, ಕಾಲಾವಕಾಶ ಕಡಿಮೆಗೊಳಿಸಬಹುದು. ಅಷ್ಟೇ ಅಲ್ಲ, ಜನ ಬೇಕಾಬಿಟ್ಟಿ ಓಡಾಡುವಂತಿಲ್ಲ. ಜಿಲ್ಲೆಗೆ ಅನ್ವಯಿಸಿ ಇಷ್ಟರಲ್ಲೇ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‍ನಲ್ಲಿಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ನಗರದ ಕೆಲವು ಖಾಸಗಿ ಹೊಟೇಲ್‍ಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News