ಮುಂಬೈಯಲ್ಲಿ ಗುಂಪು ಸೇರಿದ ಕಾರ್ಮಿಕರು: ಕೋಮು ಬಣ್ಣ ನೀಡಿದ ಚಾನೆಲ್, ಅದು ಸುಳ್ಳು ಎಂದ ಚಾನೆಲ್ ನ ಪತ್ರಕರ್ತೆ!

Update: 2020-04-17 12:34 GMT

ಲಾಕ್‌ ಡೌನ್ ನಡುವೆಯೇ ಎ.14ರಂದು ಸುಮಾರು 2,000 ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾಮಾಜಿಕ ಸುರಕ್ಷತೆಯ ನಿಯಮಗಳನ್ನು ಮರೆತು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಹೊರಗೆ ಗುಂಪು ಸೇರಿದ್ದು, ಆ ಸಂದರ್ಭ ನಡೆದ ಗಲಾಟೆ, ಪೊಲೀಸರ ಲಾಠಿಪ್ರಹಾರ ನಡೆದ ಘಟನೆ ಇತ್ತೀಚೆಗೆ ನಡೆದಿತ್ತು.

ಈ ಕಾರ್ಮಿಕರು ರೈಲ್ವೆ ನಿಲ್ದಾಣದ ಹೊರಗೆ ಗುಂಪು ಸೇರಲು ಕಾರಣವಾಗಿತ್ತೆನ್ನಲಾದ ವದಂತಿಗಳನ್ನು ಹರಡಿದ್ದ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ 11 ಜನರಲ್ಲಿ ಮರಾಠಿ ಸುದ್ದಿವಾಹಿನಿ ‘ಎಬಿಪಿ ಮಾಝಾ’ದ ವರದಿಗಾರ ರಾಹುಲ್ ಕುಲಕರ್ಣಿ ಸೇರಿದ್ದರು. ವಿಶೇಷ ರೈಲುಗಳು ಅತಂತ್ರರಾಗಿರುವ ಕಾರ್ಮಿಕರನ್ನು ಅವರ ಊರುಗಳಿಗೆ ಕರೆದೊಯ್ಯಲಿವೆ ಎಂದು ವರದಿ ಮಾಡಿದ್ದ ಕುಲಕರ್ಣಿ ರೈಲ್ವೆಯ ಆಂತರಿಕ ದಾಖಲೆಯೊಂದನ್ನು ಉಲ್ಲೇಖಿಸಿದ್ದರು. ಕುಲಕರ್ಣಿಯವರನ್ನು ಸಮರ್ಥಿಸಿಕೊಂಡಿದ್ದ ಸುದ್ದಿವಾಹಿನಿಯು ಪೊಲೀಸರು ಅವರನ್ನು ಬಂಧಿಸುವ ಮೊದಲು ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದು ಹೇಳಿತ್ತು. ನಂತರ ಮುಂಬೈನ ಸ್ಥಳೀಯ ನ್ಯಾಯಾಲಯವೊಂದು ಕುಲಕರ್ಣಿಗೆ ಜಾಮೀನು ನೀಡಿತ್ತು. ಅಂದು ಟ್ವಿಟರ್ ನಲ್ಲಿ ಎಬಿಪಿ ನ್ಯೂಸ್ ‘ಅಟ್ಯಾಕ್ ಆನ್ ಫ್ರೀ ಪ್ರೆಸ್’ ಎಂದು ಟ್ರೆಂಡ್ ಆಗಿತ್ತು.

ಎಬಿಪಿ ಸಮೂಹದ ಹಿಂದಿ ಸುದ್ದಿವಾಹಿನಿ ಎಬಿಪಿ ನ್ಯೂಸ್ ಕೂಡ ಕಾರ್ಮಿಕರು ಗುಂಪು ಸೇರಿದ್ದ ದೃಶ್ಯಗಳನ್ನು ಪ್ರಸಾರ ಮಾಡಿತ್ತು ಮತ್ತು ನಿಲ್ದಾಣದ ಹೊರಗೆ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಕಾರ್ಮಿಕರು ಗುಂಪು ಸೇರಿದ್ದು ಹೇಗೆ ಎಂದು ಪ್ರಶ್ನಿಸಿತ್ತು. ಇದನ್ನು ‘ಪಿತೂರಿ’ ಎಂದು ಬಣ್ಣಿಸಿದ್ದ ವಾಹಿನಿಯು ಈ ಘಟನೆಗೆ ಧಾರ್ಮಿಕ ಆಯಾಮವಿರುವ ಸಾಧ್ಯತೆಯಿದೆ ಎಂದು ಹೇಳಿತ್ತು.

ಕಾರ್ಮಿಕರು ಅಲ್ಲಿ ಗುಂಪು ಸೇರಲು ಮಸೀದಿಯು ಪ್ರಚೋದಿಸಿತ್ತೇ?

ಮುಸ್ಲಿಂ ನಾಯಕರು ಮಾಡಿದ್ದ ಭಾಷಣವು ಕಾರ್ಮಿಕರು ಗುಂಪು ಸೇರಲು ಪ್ರಚೋದಿಸಿತ್ತೇ?

ಜನರು ಗುಂಪು ಸೇರಲು ಜಾಮಾ ಮಸೀದಿಯು ಕಾರಣವಾಗಿತ್ತೇ?

ವಾಟ್ಸ್ ಆ್ಯಪ್ ಅಥವಾ ಫೋನ್ ಕರೆಗಳ ಮೂಲಕ ರವಾನೆಯಾಗಿದ್ದ ಸಂದೇಶಗಳು ಕಾರ್ಮಿಕರು ಅಲ್ಲಿ ಗುಂಪು ಸೇರುವಂತೆ ಮಾಡಿದ್ದವೇ?

ಇಷ್ಟೆಲ್ಲ ಆಗುವಾಗ ಮುಂಬೈ ಪೊಲೀಸರು ಮಲಗಿದ್ದರೇ ಮತ್ತು ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು?

ನೇರಪ್ರಸಾರದಲ್ಲಿ ಎಬಿಪಿ ನ್ಯೂಸ್‌ನ ನಿರೂಪಕಿ ಶೋಭನಾ ಯಾದವ ಈ ಐದು ‘ಮುಖ್ಯ ಪ್ರಶ್ನೆ’ಗಳನ್ನು ಪದೇ ಪದೇ ಕೇಳುತ್ತಲೇ ಇದ್ದರು ಮತ್ತು ಟಿವಿ ಪರದೆಯ ಮೇಲ್ಭಾಗದಲ್ಲಿ ‘ಜನರು ಗುಂಪು ಸೇರಲು ಜಾಮಾ ಮಸೀದಿಯು ಕಾರಣವಾಗಿತ್ತೇ?’ ಎಂಬ ಸಾಲು ಕಾಣಿಸಿಕೊಳ್ಳುತ್ತಲೇ ಇತ್ತು.

ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ವರದಿಗಾರ ಅಜಯ ದುಬೆ ಅವರನ್ನು,ಮಾಹಿತಿ ಏನು ಹೇಳುತ್ತಿದೆ, ಮಸೀದಿಯಲ್ಲಿನ ಜನರು ಕಾರ್ಮಿಕರನ್ನು ಅಲ್ಲಿ ಗುಂಪು ಸೇರುವಂತೆ ಪ್ರಚೋದಿಸಿದ್ದರೇ ಎಂದು ಯಾದವ ಪ್ರಶ್ನಿಸಿದ್ದರು. ಈ ಪ್ರಶ್ನೆಯಿಂದ ನುಣುಚಿಕೊಂಡ ದುಬೆ, ಈ ಬಗ್ಗೆ ಪೊಲಿಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು.

ಪೊಲೀಸರು ಅದಾಗಲೇ ಗುಂಪನ್ನು ಚದುರಿಸಿದ್ದರು. ಆದರೆ ದುಬೆ, ಯಾವುದೇ ಪೂರ್ವಯೋಜನೆ ಇಲ್ಲದೇ ಗುಂಪು ಸೇರಿತ್ತು ಎನ್ನುವುದನ್ನು ನಂಬುವುದು ಕಷ್ಟವಾಗುತ್ತದೆ ಎಂದು ಹೇಳಿದ್ದರು. ಗುಂಪು ಮಸೀದಿಯ ಬಳಿ ಸೇರಿತ್ತು ಎಂಬ ‘ಅಂಶ’ವನ್ನು ವಾಹಿನಿಯು ನಿರಂತರವಾಗಿ ಹೈಲೈಟ್ ಮಾಡುತ್ತಲೇ ಇತ್ತು.

ನಂತರ ಅದೇ ದಿನ ಎಬಿಪಿ ನ್ಯೂಸ್‌ನ ಅಧಿಕೃತ ಫೇಸ್‌ ಬುಕ್ ಪೇಜ್‌ ನಲ್ಲಿ ಲೈವ್ ವೀಡಿಯೊ ಪೋಸ್ಟ್ ಮಾಡಿದ್ದ ವಾಹಿನಿಯ ಪತ್ರಕರ್ತೆ ರುಬಿಕಾ ಲಿಯಾಕತ್ ಅವರು, ಬಾಂದ್ರಾ ನಿಲ್ದಾಣದ ಹೊರಗೆ ಮುಸ್ಲಿಮರು ಗುಂಪು ಸೇರಿದ್ದರು ಎಂಬ ವದಂತಿಗಳನ್ನು ತಳ್ಳಿಹಾಕಿದ್ದರು. ಅಲ್ಲಿ ಮುಸ್ಲಿಮರು ಸೇರಿದ್ದರು ಎಂದು ಹೇಳಲು ಪ್ರಯತ್ನಿಸುತ್ತಿರುವವರು ಸುಳ್ಳುಗಾರರು ಎಂದು ತಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದರು. ಇದು ಜಮಾಅತ್‌ ಗೆ ಅಥವಾ ಹಿಂದು-ಮುಸ್ಲಿಂ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ತಾನು ಹೊಣೆಗಾರಿಕೆಯಿಂದ ಹೇಳುತ್ತಿದ್ದೇನೆ ಎಂದು ರುಬಿಕಾ ಹೇಳಿದ್ದರು.

ವಲಸೆ ಕಾರ್ಮಿಕರು ಗುಂಪು ಸೇರಿದ್ದಕ್ಕೆ ಯಾವುದೇ ಕೋಮು ಆಯಾಮವಿತ್ತು ಎನ್ನುವುದನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.

ಎಬಿಪಿ ನ್ಯೂಸ್‌ನ ನಿರೂಪಕಿ ಯಾದವ ಅವರ ಹೇಳಿಕೆಗಳು ಮತ್ತು ನಂತರ ರುಬಿಕಾ ಲಿಯಾಕತ್ ನೀಡಿರುವ ಹೇಳಿಕೆ ಘಟನೆಗೆ ಕೋಮುಬಣ್ಣ ನೀಡಿ ‘ಮುಖ್ಯ ಪ್ರಶ್ನೆ’ಗಳನ್ನು ಎತ್ತಿದ್ದ ವಾಹಿನಿಯು ತನ್ನ ಆ ನಿಲುವಿನಿಂದ ಸಂಪೂರ್ಣ ತಿಪ್ಪರಲಾಗ ಹೊಡೆದಿರುವುದನ್ನು ಬೆಟ್ಟು ಮಾಡುತ್ತಿವೆ. ಎಬಿಪಿ ಮಾಝಾ ವಿರುದ್ಧದ ವದಂತಿಗಳನ್ನು ಸೃಷ್ಟಿಸಿದ್ದ ಆರೋಪವು ತನಿಖೆಯ ವಿಷಯವಾಗಿದ್ದರೆ, ಘಟನೆಗೆ ಕೋಮು ಬಣ್ಣ ನೀಡಿದ್ದಕ್ಕಾಗಿ ಮತ್ತು ಮುಸ್ಲಿಂ ಸಮುದಾಯವನ್ನು ಹೊಣೆಯಾಗಿಸಿದ್ದಕ್ಕಾಗಿ ಎಬಿಪಿ ನ್ಯೂಸ್‌ ನ್ನು ಖಂಡಿಸಲೇಬೇಕು.

ಕೋವಿಡ್-19 ಬಿಕ್ಕಟ್ಟಿಗೆ ಕೋಮು ಬಣ್ಣ ನೀಡುವಲ್ಲಿ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಲು ಮುಸ್ಲಿಂ ಸಮುದಾಯವೇ ಕಾರಣ ಎಂದು ನೇರವಾಗಿ ದಾಳಿ ನಡೆಸಿರುವ ವಾಹಿನಿಗಳು ಯಾವುದೇ ಭೀತಿಯಿಲ್ಲದೆ ತಪ್ಪು ಮಾಹಿತಿಗಳನ್ನು ಹರಡುತ್ತಲೇ ಇವೆ.

Full View Full View

Writer - ಜಿಗ್ನೇಶ್ ಪಟೇಲ್, altnews.in

contributor

Editor - ಜಿಗ್ನೇಶ್ ಪಟೇಲ್, altnews.in

contributor

Similar News