ಮಂಡ್ಯದಲ್ಲಿ ಮೂವರಿಗೆ ಸೋಂಕು ದೃಢ: ಕೊರೋನ ಪೀಡಿತರ ಸಂಖ್ಯೆ 11ಕ್ಕೆ ಏರಿಕೆ
Update: 2020-04-17 18:19 IST
ಮಂಡ್ಯ, ಎ.17: ಜಿಲ್ಲೆಯಲ್ಲಿ ಶುಕ್ರವಾರ 3 ಮಂದಿಗೆ ಕೊರೋನ ವೈರಸ್ ಕಾಣಿಸಿಕೊಂಡಿದ್ದು, ಕೊರೋನ ಪೀಡಿತರ ಸಂಖ್ಯೆ ಹನ್ನೊಂದಕ್ಕೇರಿದೆ. ಈ ಮೂವರು ಸಹ ಮಳವಳ್ಳಿಯ ನಿವಾಸಿಗಳಾಗಿದ್ದು, ಕೊರೋನ ಪೀಡಿತ ವ್ಯಕ್ತಿಯ (ಪಿ171) ಸಂಪರ್ಕ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.
ಇವರಿಗೆ ಮಂಡ್ಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ವೈರಸ್ ಕಾಣಿಸಿಕೊಂಡಿರುವ ಈ ಮೂವರಲ್ಲಿ ಸೋಂಕಿನ ರೋಗ ಲಕ್ಷಣದ ಕೆಮ್ಮು, ನೆಗಡಿ, ಜ್ವರ, ಕಫ, ಉಸಿರಾಟದ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಲಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.