ಪವಿತ್ರ ಆರ್ಥಿಕತೆ ಅನುಷ್ಠಾನಕ್ಕೆ ಆಗ್ರಹ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರಂಗಕರ್ಮಿ ಪ್ರಸನ್ನ

Update: 2020-04-17 16:27 GMT

ಬೆಂಗಳೂರು, ಎ.17: ಪವಿತ್ರ ಆರ್ಥಿಕತೆ ಅನುಷ್ಠಾನಕ್ಕೆ ಸರಕಾರ ತನ್ನ ನೀತಿ ಪ್ರಕಟಿಸಬೇಕೆಂದು ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ರಂಗಕರ್ಮಿ, ಚಿಂತಕ ಪ್ರಸನ್ನ ಅವರು ಇಂದು(ಎ.17) ಸಂಜೆ 5ಗಂಟೆಗೆ ಉಪವಾಸ ಅಂತ್ಯಗೊಳಿಸಿದ್ದಾರೆ.

ಕೊರೋನ ವೈರಸ್ ಕಾಲದಲ್ಲಿ ದೇಶ ಕಾಣುತ್ತಿರುವ ಸಂಕಷ್ಟವನ್ನು ಪವಿತ್ರ ಆರ್ಥಿಕತೆ ಮಾತ್ರ ಉಳಿಸಬಲ್ಲದು. ರಾಕ್ಷಸ ಆರ್ಥಿಕತೆ, ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವ ಧೋರಣೆಯಿಂದ ಸುಸ್ಥಿರ ಆರ್ಥಿಕತೆ ಸಾಧ್ಯವಿಲ್ಲ. ಹೀಗಾಗಿ, ಪವಿತ್ರ ಆರ್ಥಿಕತೆ ಅನುಷ್ಠಾನಕ್ಕೆ ಸರಕಾರ ತನ್ನ ನೀತಿ ಪ್ರಕಟಿಸಬೇಕೆಂದು ಒತ್ತಾಯಿಸಿ ಉಪವಾಸ ಆರಂಭಿಸಿದ್ದರು.

ಈ ಹಿಂದೆ ಕೇಂದ್ರ ಸಚಿವ ಸದಾನಂದಗೌಡ ಅವರ ಜೊತೆ ಮಾತುಕತೆ ಸಂದರ್ಭದಲ್ಲಿ ತಾತ್ವಿಕವಾಗಿ ಒಪ್ಪಿಕೊಂಡ ವಿಷಯಗಳನ್ನು ಜಾರಿ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅಲ್ಲದೆ, ಪ್ರಸನ್ನ ಅವರು ಕೊರೋನ ನಿಯಂತ್ರಣಕ್ಕೆ ಆಡಳಿತ ಪ್ರಯತ್ನ ನಡೆಸುತ್ತಿರುವಾಗ ಈ ಕೆಲಸಕ್ಕೆ ತೊಂದರೆ ಆಗಬಾರದು ಎಂದು ಅಜ್ಞಾತ ಸ್ಥಳದಲ್ಲೇ ಉಪವಾಸ ಮಾಡುತ್ತಿದ್ದರು.

ಕೊರೋನ ಸಂದರ್ಭದಲ್ಲಿಯೇ ಈ ಒತ್ತಾಯ ಮಾಡುವುದು ಸೂಕ್ತ. ಹೀಗಾಗಿಯೇ ಉಪವಾಸ ಮಾಡುತ್ತಿದ್ದೇನೆ ಎಂದು ಅವರು ಎಷ್ಟೇ ಒತ್ತಾಯ ಬಂದರೂ ಉಪವಾಸ ನಿಲ್ಲಿಸದೇ ಮುಂದುವರಿಸಿದ್ದರು. ಕೊರೋನ ಸಂದರ್ಭದಲ್ಲಿ ಉಪವಾಸ ಬೇಡ ಎಂದು ನಾಡಿನ ಹಲವರು ಅವರನ್ನು ಒತ್ತಾಯಿಸಿದ್ದರು.

ಸರಕಾರಕ್ಕೆ ಬಹಿರಂಗ ಪತ್ರ ಬರೆದಿರುವ ಅವರು 8 ದಿನಗಳ ನಂತರ ಶುಕ್ರವಾರ ಸಂಜೆ 5ಗಂಟೆಗೆ ಉಪವಾಸ ಕೈಬಿಟ್ಟಿದ್ದಾರೆ. ಸದ್ಯಕ್ಕೆ ಉಪವಾಸ ಕೈಬಿಟ್ಟಿದ್ದೇನೆ. ಹೋರಾಟ ನಿಲ್ಲದು. ಮತ್ತೆ ಮುಂದುವರಿಯುವುದು ಎಂದು ಪ್ರಸನ್ನ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News