×
Ad

ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದ್ದವರಿಗೂ ನಾಳೆಯಿಂದ ಅಕ್ಕಿ ವಿತರಣೆ: ಸಚಿವ ಗೋಪಾಲಯ್ಯ

Update: 2020-04-17 22:46 IST

ಬೆಂಗಳೂರು, ಎ.17: ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವ 1.89 ಲಕ್ಷ ಅರ್ಜಿದಾರರಿಗೆ ಎ.18ರಿಂದ ಪ್ರತಿ ತಿಂಗಳು 10 ಕೆಜಿ ಅಕ್ಕಿ ಮೂರು ತಿಂಗಳವರೆಗೆ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಅರ್ಜಿ ರಶೀದಿಯನ್ನು ತೋರಿಸಬೇಕು. ಹಾಗೂ ಇವರ ಮೊಬೈಲ್ ನಂಬರ್ ಗೆ ಬರುವ ಒಟಿಪಿ ನಂಬರ್ ಆಧಾರದ ಮೇಲೆ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ಹಾಗೂ ಎಪಿಎಲ್ ಕಾರ್ಡ್‍ದಾರರಿಗೂ 15 ರೂ. ದರದಲ್ಲಿ 10 ಕೆಜಿ ಅಕ್ಕಿ ವಿತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕೇಂದ್ರ ಸರಕಾರದಿಂದ ಕೊಡಮಾಡುವ ಪಡಿತರವನ್ನು ಮೇ 1ರಿಂದ ವಿತರಿಸಲು ತೀರ್ಮಾನಿಸಲಾಗಿದೆ. ಎಪ್ರಿಲ್, ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ಹಂತ ಹಂತವಾಗಿ ಕೊಡಲಾಗುವುದು. ತಿಂಗಳಿಗೆ ಒಬ್ಬರಿಗೆ 5 ಕೆಜಿ ಅಕ್ಕಿ ಹಾಗೂ ಒಂದು ಕುಟುಂಬಕ್ಕೆ ಒಂದು ಕೆಜಿ ಬೇಳೆ ಕೊಡಲಾಗುವುದು. ಸದ್ಯಕ್ಕೆ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಹಾಗೂ ಮುಖ್ಯಮಂತ್ರಿ ಆನಿಲ ಭಾಗ್ಯ ಯೋಜನೆಯಡಿ ಮೂರು ತಿಂಗಳ ಎಲ್‍ಪಿಜಿ ಗ್ಯಾಸ್ ಸಿಲಿಂಡರನ್ನು ನೀಡಲು ಆರ್ಥಿಕ ಇಲಾಖೆಯಿಂದ 25 ಕೋಟಿ ರೂ. ವೆಚ್ಚಕ್ಕೆ ಈಗಾಗಲೇ ಅನುಮತಿ ಪಡೆದಿದ್ದು, ವಿತರಣೆ ಕಾರ್ಯ ಆರಂಭಗೊಳ್ಳಲಿದೆ. ಬಿಜಾಪುರ ಹಾಗೂ ರಾಯಚೂರಿನಲ್ಲಿ ಒಂದು ಲಕ್ಷ ಮೆಟ್ರಿಕ್‍ ಟನ್ ಜೋಳವನ್ನು ಖರೀದಿಸಲು ಕೇಂದ್ರದಿಂದ ಒಪ್ಪಿಗೆ ಪಡೆದಿದ್ದೇವೆ. ಎ.20ರಿಂದ ನೋಂದಣಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದಡಿ 5,375 ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ 373 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 13 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೂ ಪಡಿತರ ವಿತರಣೆಯಲ್ಲಿ ಕರ್ತವ್ಯ ಲೋಪ ಎಸಗಿದ 325 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದ್ದು, 99 ಕೇಂದ್ರಗಳನ್ನು ರದ್ದು ಪಡಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News