ಎ.20ರ ನಂತರ ಶರತ್ತುಗಳೊಂದಿಗೆ ನಿರ್ಮಾಣ ಕಾಮಗಾರಿಗಳ ಆರಂಭಕ್ಕೆ ಅನುಮತಿ: ಸಚಿವ ಜಗದೀಶ ಶೆಟ್ಟರ್

Update: 2020-04-17 17:44 GMT

ಧಾರವಾಡ, ಎ.17: ಎರಡನೆ ಹಂತದ ಲಾಕ್‍ಡೌನ್ ಅವಧಿ ಮೇ.3ರ ವರೆಗೂ ವಿಸ್ತರಣೆ ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಾರದು. ಕಾರ್ಮಿಕರಿಗೂ ಕನಿಷ್ಟ ಜೀವನ ನಿರ್ವಹಣೆ ಮಾಡಲು ಉದ್ಯೋಗ ಸಿಗಬೇಕು ಎನ್ನುವ ಆಶಯದೊಂದಿಗೆ ಕಂಟೈನ್‍ಮೆಂಟ್ ಪ್ರದೇಶ ಹೊರತುಪಡಿಸಿ ಜಿಲ್ಲೆಯಲ್ಲಿ ಕಟ್ಟಡ, ರಸ್ತೆ, ಸೇತುವೆ ಮೊದಲಾದ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಶರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇರುವ ಲೋಕೋಪಯೋಗಿ, ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು, ನಿರ್ಮಿತಿ ಕೇಂದ್ರ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಿವಿಲ್ ಕಾಮಗಾರಿ ಇಲಾಖೆಗಳ ಇಂಜಿನಿಯರ್ ಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಕಾರ್ಮಿಕರಿಗೆ ವಸತಿ, ಕ್ಯಾಂಪ್‍ಗಳನ್ನು ನಿರ್ಮಿಸಿ ಅಲ್ಲಿಯೇ ಊಟ, ಉಪಾಹಾರ ಸೌಕರ್ಯಗಳನ್ನು ಒದಗಿಸಬೇಕು. ಪ್ರತಿದಿನ ಕಾರ್ಮಿಕರು ತಮ್ಮ ಸ್ಥಳಗಳಿಗೆ ಸಂಚರಿಸಲು ಅವಕಾಶ ಇರುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

ನಿರ್ಮಾಣ ಕಾಮಗಾರಿಗಳನ್ನು ಅನುಮತಿ ಪಡೆದು ಕೈಗೊಳ್ಳಬಹುದು. ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿಯೆ ವಸತಿ ಕಲ್ಪಿಸಬೇಕು. ಸಾಮಾಜಿಕ ಅಂತರ, ಶುಚಿತ್ವ ಕಾಪಾಡಬೇಕು. ಪ್ಲಂಬರ್‍ಗಳು, ಮೋಟಾರ್ ಮೆಕ್ಯಾನಿಕ್‍ಗಳು ಹಾಗೂ ಪೂರಕ ಚಟುವಟಿಕೆಗಳ ಕಾರ್ಮಿಕರಿಗೂ ಈ ವಿನಾಯಿತಿ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ತಡಸಿನಕೊಪ್ಪದ ಬಳಿ ಐಐಐಟಿ ಕಾಮಗಾರಿ ಸ್ಥಗಿತವಾಗಿದೆ. ಆದರೆ, ಕಾರ್ಮಿಕರು ಅಲ್ಲಿಯೆ ಇದ್ದಾರೆ. ಅಂತಹ ಕಡೆಗಳಲ್ಲಿ ಕೆಲಸಗಳನ್ನು ಪುನರಾರಂಭಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮುಂದುವರೆಯಲಿ. ಲಾಕ್‍ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ನರೇಗಾ ಯೋಜನೆಯಡಿ ವೈಯಕ್ತಿಕ ಚಟುವಟಿಕೆಗಳು ನಡೆಯುತ್ತಿವೆ. ಅದೇ ರೀತಿ ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಅವರು ತಿಳಿಸಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆಯು ಬೆಳಗಾವಿ, ಧಾರವಾಡ, ಗದಗ ಹಾಗೂ ಭಾಗಶಃ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಇಲ್ಲಿನ ಕಾಮಗಾರಿಗಳು ನಡೆಯಬೇಕು.  ಗುತ್ತಿಗೆದಾರರು ಕಾರ್ಮಿಕರಿಗೆ ಕ್ಯಾಂಪ್‍ಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುವ ಶರತ್ತಿನೊಂದಿಗೆ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದರು.

ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರು ಹಾಗೂ ಇಟ್ಟಿಗೆ ಭಟ್ಟಿ ಕಟ್ಟಡ ಕಾಮಗಾರಿ ಸ್ಥಳಗಳಲ್ಲಿ ಬೀಡು ಬಿಟ್ಟಿರುವ ಕಾರ್ಮಿಕರಿಗೆ ಆಹಾರಕಿಟ್ ವಿತರಣೆ ಮುಂದುವರೆಯಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಎಸ್‍ಡಿಆರ್‍ಎಫ್ ನಿಧಿಯಡಿ 436 ವಲಸೆ ಕಾರ್ಮಿಕರಿಗೆ ಸರಕಾರದ ಹಾಸ್ಟೇಲ್‍ಗಳಲ್ಲಿ ವಸತಿ ಕಲ್ಪಿಸಿ ಊಟ, ಉಪಾಹಾರ, ಬಟ್ಟೆ ನೀಡಲಾಗಿದೆ. ಇಟ್ಟಿಗೆಭಟ್ಟಿ ಕಾರ್ಮಿಕರಿಗೆ ಸುಮಾರು 3,000 ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ಜಲಮಂಡಳಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ವಿವಿಧ ಇಲಾಖೆಗಳ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News