'ಭಾಷಣ ಸಾಕು-ನೆರವು ಬೇಕು': ಎ.21ರಂದು ದೇಶವ್ಯಾಪಿ ಪ್ರತಿಭಟನೆಗೆ ಸಿಪಿಎಂ ಕರೆ

Update: 2020-04-18 13:49 GMT

ಬೆಂಗಳೂರು, ಎ. 18: ಕೊರೋನ ವೈರಸ್ ಸೋಂಕು ತಡೆಗೆ ಹೇರಿರುವ ಲಾಕ್‍ಡೌನ್ ಪರಿಸ್ಥಿತಿ ದುರ್ಬಳಕೆ ಮಾಡಿ, ಕಾರ್ಮಿಕ ವರ್ಗದ ಮೇಲೆ ಮಾಲಕರ ದೌರ್ಜನ್ಯ ಖಂಡಿಸಿ ಎ.21ರಂದು 'ಭಾಷಣ ಸಾಕು-ನೆರವು ಬೇಕು' ಘೋಷಣೆಯೊಂದಿಗೆ ದೇಶವ್ಯಾಪಿ ತಾವಿದ್ದಲ್ಲಿಯೇ ಪ್ರತಿಭಟನೆ ನಡೆಸಲು ಸಿಪಿಎಂ ರಾಜ್ಯ ಸಮಿತಿ ಕರೆ ನೀಡಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು ಹಾಗೂ ವೇತನ ಕಡಿತ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ, ಮಾಲಕರು ಪ್ರಧಾನಿ ಮೋದಿ ಹಾಗೂ ರಾಜ್ಯ ಸರಕಾರದ ಆದೇಶವನ್ನು ಲೆಕ್ಕಿಸದೆ ಮಾರ್ಚ್ ತಿಂಗಳ ವೇತನ ಕಡಿತ ಮಾಡಲಾಗಿದೆ. ಹಲವು ಕಡೆಗಳಲ್ಲಿ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.

ಸಂಘಟಿತ ವಲಯದ ಉದ್ದಿಮೆಗಳಲ್ಲಿ ಗುತ್ತಿಗೆ, ತಾತ್ಕಾಲಿಕ ಕೆಲಸಗಾರರಿಗೆ ಇದು ತೀವ್ರ ತೊಂದರೆಯಾಗಿದೆ. ಕೇಂದ್ರ ಸರಕಾರ ಯಾವುದೇ ಪರಿಹಾರ ಪ್ರಕಟಿಸಿಲ್ಲದಿರುವುದರಿಂದ ಈ ಕಾರ್ಮಿಕರಿಗೆ ಎಪ್ರಿಲ್ ತಿಂಗಳ ವೇತನವೂ ಸಿಗುವ ಸಂಭವವಿಲ್ಲ. ಹೀಗಾಗಿ ಉದ್ಯೋಗ, ಆದಾಯ ಮತ್ತು ಬದುಕು ಕಳೆದುಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಇದೇ ವೇಳೆ ಕೆಲಸದ ಅವಧಿ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯೂ ಸರಕಾರದ ಮುಂದಿದೆ. ಲಾಕ್‍ಡೌನ್ ಅವಧಿಯಲ್ಲಿ ವೇತನ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ರಾಷ್ಟ್ರದ 35 ಕೋಟಿ ಇಎಸ್‍ಐ ಸೌಲಭ್ಯವಿರುವ ಕಾರ್ಮಿಕರಿಗೆ ಇಎಸ್‍ಐನಿಂದ ಶೇ.75ರಷ್ಟು ವೇತನ ನೀಡಬೇಕು ಎಂದಿದೆ. ಅದರಂತೆ ಇಎಸ್ಐನಲ್ಲಿರುವ 85 ಸಾವಿರ ಕೋಟಿ ರೂ.ನಿಧಿಯನ್ನು ಬಳಸಿ 2 ತಿಂಗಳ ವೇತನ ನೀಡಲು ಮಾಲಕರ ಸಂಘ ಸೂಚಿಸಿರುವುದು ಸರಿಯಲ್ಲ ಎಂದು ಸಿಪಿಎಂ ಆಕ್ಷೇಪಿಸಿದೆ.

ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಕಾರ್ಮಿಕರಿಗೆ ವೇತನ ಮತ್ತು ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ತಪ್ಪಿಸಬೇಕು. ಸರಕಾರಕ್ಕೆ ಮಾಲಕರು ಮೊರೆ ಇಟ್ಟಿರುವುದು ಅತ್ಯಂತ ಹೇಯ. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ ತಿರಸ್ಕರಿಸಬೇಕು. ಜೊತೆಗೆ ಅದೇ ರೀತಿಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನಗಳನ್ನು ಕೇಂದ್ರ ತಕ್ಷಣವೇ ಕೈಬಿಡಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದಶಿ ಯು.ಬಸವರಾಜು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News