ಕೊರೋನ ತಡೆಗಟ್ಟುವ ವಿಚಾರ; ಎ.19ರಂದು ಸರ್ವಪಕ್ಷ ಸಭೆ- ಸಚಿವ ಬಿ.ಶ್ರೀರಾಮುಲು

Update: 2020-04-18 13:39 GMT

ಬಳ್ಳಾರಿ, ಎ.18: ರಾಜ್ಯದಲ್ಲಿ ಕೋವಿಡ್-19 ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎ.19ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಶನಿವಾರ ನಗರದ ರೂಪನಗುಡಿ ರಸ್ತೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹಾಗು ಇತರ ದಾನಿಗಳಿಂದ 45 ಸಾವಿರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.

ನಿನ್ನೆ ಮುಖ್ಯಮಂತ್ರಿ ಹಿರಿಯ ಸಚಿವರು, ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳನ್ನು ಎ, ಬಿ, ಸಿ ಎಂದು ವಿಂಗಡನೆ ಮಾಡಲಾಗಿದೆ. ಎ.20ರ ನಂತರ ನಿಯಮ ಸಡಿಲಿಕೆಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಜನರು ಬಹಳ ದಿನಗಳಿಂದ ಒಂದೇ ಕಡೆ ಇದ್ದಾರೆ. ಕೆಲವೆಡೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸುರಕ್ಷಿತ ಅಂತರ ಕಾಯ್ದುಕೊಳ್ಳುವಲ್ಲಿ ಜನರ ಸಹಕಾರ ಅಗತ್ಯ. ಕಿತ್ತಳೆ ಝೋನ್(ಆರೆಂಜ್ ಝೋನ್)ನಲ್ಲಿ ಲಾಕ್‍ಡೌನ್ ಸಡಿಲಿಕೆ ವಿಚಾರವಾಗಿ ಮುಖ್ಯಮಂತ್ರಿ ಬಳಿ ಸಲಹೆ ನೀಡಿದ್ದೇನೆ. ಬಳ್ಳಾರಿಯಲ್ಲಿ 45 ಸಾವಿರ ಕುಟುಂಬಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ದಾನಿಗಳು ರೇಷನ್ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ದಾನಿಗಳಿಗೆ ಭಗವಂತ ಮತ್ತಷ್ಟು ಶಕ್ತಿ ಕೊಡಲಿ ಎಂದು ಶ್ರೀರಾಮುಲು ಹಾರೈಸಿದರು.

ಹೊಸಪೇಟೆಯಲ್ಲಿ 11 ಪಾಸಿಟಿವ್ ಪ್ರಕರಣ ವಿಚಾರದ ಕುರಿತು 'ಸೀಲ್‍ಡೌನ್ ಆದ ಪ್ರದೇಶಗಳು ಮಾತ್ರ ಕಟ್ಟುನಿಟ್ಟಾಗಿ ಮಾಡಿ, ಉಳಿದ ಕಡೆ ಸಡಿಲಿಕೆ ನೀಡೋದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನ ನಿವಾರಣೆಯಾಗುತ್ತದೆ ಎಂದಿಲ್ಲ

ಉಪ್ಪು ಮತ್ತು ಅರಿಶಿನವನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಹಾಗೂ ಚೀನಾ ವೈದ್ಯಕೀಯ ಪದ್ದತಿಯಲ್ಲಿ Anti Biotic ಆಗಿ ಬಳಸಲಾಗಿದೆ. ಅದನ್ನು ಉಲ್ಲೇಖಿಸಿ ಉಪ್ಪು ಹಾಗೂ ಅರಿಶಿನವನ್ನು ಬಿಸಿ ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದು ಒಂದು ಬಗೆಯ ಆರೋಗ್ಯ ಸುರಕ್ಷಾ ಕ್ರಮವೆಂದು ಹೇಳಿದ್ದೇನೆ ಹೊರತು, ಅದರಿಂದ ಕೊರೋನ ನಿವಾರಣೆಯಾಗುತ್ತದೆ ಎಂದಲ್ಲ.

-ಶ್ರೀರಾಮುಲು ಟ್ವೀಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News