ಕೊರೋನ ಪರೀಕ್ಷೆಗಾಗಿ ಬೆಳಗಾವಿಗೆ ರ‍್ಯಾಪಿಡ್ ಕಿಟ್‍ಗಳ ಅಗತ್ಯವಿದೆ: ಜಗದೀಶ್ ಶೆಟ್ಟರ್

Update: 2020-04-18 13:41 GMT

ಬೆಳಗಾವಿ, ಎ.18: ಕೊರೋನ ಸೋಂಕಿನ ಪರೀಕ್ಷೆಗಾಗಿ ರ‍್ಯಾಪಿಡ್ ಕಿಟ್‍ಗಳು ಅಗತ್ಯವಿದ್ದು, ಅದನ್ನು ಬೆಳಗಾವಿಗೂ ಒದಗಿಸಲು ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಕೊರೋನ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೆಳಗಾವಿಯಲ್ಲಿ ಕೊರೋನ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಇದನ್ನು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚು ಮಾದರಿಗಳ ಪರಿಶೀಲನೆಗೆ ಅಗತ್ಯವಿರುವ ರ‍್ಯಾಪಿಡ್ ಕಿಟ್‍ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಕ್ವಾರಂಟೈನ್ ಕೇಂದ್ರಗಳನ್ನು ರಾತ್ರಿ ವೇಳೆಯಲ್ಲೂ ಹೆಚ್ಚು ನಿಗಾ ವಹಿಸುವುದು ಹಾಗೂ ಸೋಂಕಿತರ ನಡುವೆ ಹೆಚ್ಚು ಅಂತರವಿರುವಂತೆ ನೋಡಿಕೊಳ್ಳಬೇಕಾಗಿದೆ. ಸೋಂಕಿತರ ಪರೀಕ್ಷೆಯ ವೇಳೆ ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್‍ಗಳನ್ನು ನೇರವಾಗಿ ಖರೀದಿಸಲು ಅವಕಾಶವಿದ್ದರೆ ಪಡೆದುಕೊಳ್ಳಬಹುದು. ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಇದನ್ನು ನಿಯಂತ್ರಿಸಲು ಹೆಚ್ಚು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಶಾಸಕರಾರ ಅನಿಲ್ ಬೆನಕೆ, ಅಭಯ್ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೋವಿಡ್ ನಿಯಂತ್ರಣಾ ಕ್ರಮಗಳ ಉಸ್ತುವಾರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೊಲೀಸ್ ಆಯುಕ್ತ ಲೋಕೇಶ್‍ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News