×
Ad

ಚಿಕ್ಕಮಗಳೂರು: ಆಲಿಕಲ್ಲು ಸಹಿತ ಧಾರಾಕಾರ ಮಳೆ

Update: 2020-04-18 20:15 IST

ಚಿಕ್ಕಮಗಳೂರು, ಎ.18: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದರೆ, ಬಯಲುಸೀಮೆ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸಹಿತ ಮಳೆಯಾದ ಬಗ್ಗೆ ವರದಿಯಾಗಿದೆ.

ಕಳೆದ ರವಿವಾರದಿಂದ ಗುರುವಾರದವರೆಗೆ ಜಿಲ್ಲಾದ್ಯಂತ ಅಲ್ಲಲ್ಲಿ ಮಳೆಯಾಗಿದ್ದು, ಶುಕ್ರವಾರ ಜಿಲ್ಲೆಯಲ್ಲಿ ಮಳೆಯ ಸುಳಿವಿರಲಿಲ್ಲ. ಆದರೆ ಶನಿವಾರ ಇಡೀ ದಿನ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 4ರ ಹೊತ್ತಿಗೆ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. 

ಮಲೆನಾಡು ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆ ಭಾರೀ ಗಾಳಿ, ಗುಡುಗು, ಸಿಡಿಲಿನ ಆರ್ಭಟ ಹೆಚ್ಚಿದ್ದು, ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಹಿತ್ಮುಮಕ್ಕಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನು ಕೆಲ ತಾಲೂಕುಗಳ ವ್ಯಾಪ್ತಿಯಲ್ಲಿ ಮರಗಳು ಧರೆಗುರುಳಿದ ಬಗ್ಗೆ ವರದಿಯಾಗಿದೆ.

ಇನ್ನು ಚಿಕ್ಕಮಗಳೂರು ತಾಲೂಕಿನಾದ್ಯಂತ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ತುಂತುರು ಮಳೆಯಾಗಿದೆ. ತರೀಕೆರೆ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ತರೀಕೆರೆ ಪಟ್ಟಣದಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಜನರು ಪಾತ್ರೆಗಳಲ್ಲಿ ಆಲಿಕಲ್ಲು ಸಂಗ್ರಹಿಸುತ್ತಿದ್ದ ದೃಶ್ಯಗಳು ಕಂಡುಬಂದವು. 1 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆ ಹಾಗೂ ಭಾರೀ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲು ರಾಶಿ ಕಂಡು ಜನರು ಆತಂಕ್ಕಕೊಳಗಾಗಿದ್ದರು.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿದ್ದು, ಕೊರೋನ ಭೀತಿಗೆ ಲಾಕ್‍ಡೌನ್ ಆಗಿರುವ ಇಡೀ ಜಿಲ್ಲೆಯ ಜನರಲ್ಲಿ ಮಳೆ ಆಹ್ಲಾದ ನೀಡಿದ್ದು, ಕೃಷಿಕರು, ಕಾಫಿ, ಅಡಿಕೆ ಬೆಳೆಗಾರರ ಮುಖದಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News