ತಬ್ಲೀಗಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಆಸ್ತಿ ಮುಟ್ಟುಗೋಲು ಹಾಕಬೇಕು: ಸಂಸದೆ ಶೋಭಾ

Update: 2020-04-18 14:56 GMT

ಚಿಕ್ಕಮಗಳೂರು, ಎ.18: ತಬ್ಲೀಗಿಗಳಿಂದ ದೇಶದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ. ಅವರು ಚಿಕಿತ್ಸೆ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ, ಕೊರೋನ ಸೋಂಕಿನಿಂದ ಮೃತಪಟ್ಟವರ ಸಾವಿಗೆ ತಬ್ಲೀಗಿಗಳೇ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ, ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದವರಿಂದ ಕೊರೋನ ಪ್ರಕರಣ ಜಾಸ್ತಿಯಾಗುತ್ತಿದೆ. ಅವರು ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ, ಅನೇಕರು ನಾಪತ್ತೆಯಾಗಿದ್ದಾರೆ. ಅಂತವರಿಗೆ ನಾವು ಕಟ್ಟುವ ತೆರಿಗೆಯಿಂದ ಚಿಕಿತ್ಸೆಯ ವೆಚ್ಚ ಭರಿಸಬೇಕು. ಸರಕಾರ ಅಂತವರ ಮೇಲೆ ಪ್ರಕರಣ ದಾಖಲಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ಎಂದ ಅವರು, ಉದ್ದೇಶಪೂರ್ವಕವಾಗಿ ಸೋಂಕನ್ನು ಹರಡುತ್ತಿರುವವರು ಜಿಹಾದಿಗಳು, ಉಗ್ರಗಾಮಿಗಳಾಗಿದ್ದಾರೆಂದು ಆರೋಪಿಸಿದರು.

ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದ ಬಹಳಷ್ಟು ಮಂದಿಗೆ ಕೊರೋನ ಬಂದಿದೆ. ತಮಿಳುನಾಡು, ಮಹಾರಾಷ್ಟ್ರ, ರಾಜ್ಯದ ಬೆಳಗಾವಿ ಜಿಲ್ಲೆ ಇದಕ್ಕೆ ಉದಾಹಣೆಯಾಗಿದ್ದು, ಅವರು ಯಾಕೆ ಸ್ವಯಂ ಪ್ರೇರಿತವಾಗಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ ? ಇದೊಂದು ಷಡ್ಯಂತ್ರ ಎಂದು ಆರೋಪಿಸಿದ ಅವರು, ತಬ್ಲೀಗ್ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಪತ್ತೆಯಾದವರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ಮಾಹಿತಿ ಕಲೆ ಹಾಕುತ್ತಿದೆ. ಸದ್ಯ ಕೊರೋನ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದು, ಕೊರೋನ ನಿಯಂತ್ರಣಕ್ಕೆ ಬಂದ ನಂತರ ಸರಕಾರ ಇವರ ಮೇಲೆ ಕ್ರಮಕೈಗೊಳ್ಳಲಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಕೊರೋನ ಪ್ರಕರಣ ಕಂಡು ಬಂದಿಲ್ಲ. ಉಡುಪಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಕಂಡು ಬಂದಿವೆ. ಮೂರರಲ್ಲಿ ಇಬ್ಬರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಝೋನ್ ಆಗಿದ್ದು ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್‍ಗೆ ತರಲು ಸಾರ್ವಜನಿಕರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಲಿಕೆ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಕೊರೋನ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಜೀವನ ಭದ್ರತೆ ಕಲ್ಪಿಸುವಂತೆ ಮತ್ತು ವೇತನ ನಿಗದಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

ಮೈಸೂರು ಜಿಲ್ಲೆಯಲ್ಲಿ ರಸ್ತೆಗಳ ಮೇಲೆ ನೋಟುಗಳನ್ನು ಎಸೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ವದ ಎದುರು ಭಾರತ ದೌರ್ಬಲ್ಯವನ್ನು ಪ್ರದರ್ಶಿಸಬೇಕೆನ್ನುವ ಉದ್ದೇಶದಿಂದ ಇಂತಹ ಪಿತೂರಿಯನ್ನು ನಡೆಸಲಾಗುತ್ತಿದೆ. ಇಂತವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News