×
Ad

ಲಾಕ್​ಡೌನ್ ಸಡಿಲಿಕೆ ವಿಚಾರ: ವಿರೋಧದ ಬಳಿಕ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರಕಾರ

Update: 2020-04-18 21:20 IST

ಬೆಂಗಳೂರು, ಎ.18: 'ಕಂಟೈನ್ಮೆಂಟ್ ಝೋನ್' ಹೊರತುಪಡಿಸಿ, ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಪಾಸ್ ಇರುವ ಕಾರುಗಳು, ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಎ.20ರ ಬಳಿಕ ಅನುಮತಿ ನೀಡಲಾಗುವುದು' ಎಂಬ ತೀರ್ಮಾನಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ರಾಜ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.

ಎ.20ರ ನಂತರ ಲಾಕ್ ಡೌನ್ ಸಡಿಲಿಕೆ ಬಗ್ಗೆ ಸಿಎಂ ಯಡಿಯೂರಪ್ಪ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಹಿತಿ ನೀಡಿದ್ದರು. 'ಕಂಟೈನ್ಮೆಂಟ್ ಝೋನ್' ಹೊರತುಪಡಿಸಿ, ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಎ.20ರ ಬಳಿಕ ಅನುಮತಿ ನೀಡಲಾಗುವುದು. ಐಟಿ-ಬಿಟಿ ವಲಯಗಳಲ್ಲಿ ಶೇ.33ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ ಇದೆ. ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಬಹುದು" ಎಂದು ತಿಳಿಸಿದ್ದರು.

ಆದರೆ ಸರಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮುಖ್ಯಮಂತ್ರಿ ನಿರ್ಧಾರ ಬದಲಿಸಿದ್ದು, "ಎ.20ರ ಬಳಿಕ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಸರಕಾರದ ನಿರ್ಣಯವನ್ನು ಪುನರ್ ಪರಿಶೀಲಿಸಿದ ಬಳಿಕ ಆದೇಶ ಹೊರಡಿಸಿದ್ದು, ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ನಿರ್ಣಯ ಹಿಂಪಡೆಯಲಾಗಿದೆ. ಐಟಿ-ಬಿಟಿ ಕಂಪೆನಿಗಳಲ್ಲಿ ತುರ್ತು ಕೆಲಸಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ನೌಕರರು ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ" ಎಂದು ಮುಖ್ಯಮಂತ್ರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News