ಆಲಮಟ್ಟಿ ಜಲಾಶಯದ ನೀರು ಕೆರೆಗಳಿಗೆ ಬಿಡುಗಡೆ: ಗೋವಿಂದ ಕಾರಜೋಳ

Update: 2020-04-18 16:05 GMT

ವಿಜಯಪುರ, ಎ.18: ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಅವಶ್ಯಕತೆ ಇರುವುದರಿಂದ ಆಲಮಟ್ಟಿ ಜಲಾಶಯ(ಲಾಲ್‍ಬಹದ್ದೂರ್ ಶಾಸ್ತ್ರಿ)ದಿಂದ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಜಾಲದಡಿ ಬರುವ ಕೆರೆಗಳನ್ನು ತುಂಬಿಸಲು 2 ಟಿಎಂಸಿ ನೀರನ್ನು ಶೀಘ್ರ ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಮುಳವಾಡ ಏತ ನೀರಾವರಿ ಯೋಜನೆಯ ಜಾಲದಡಿ 70 ಕೆರೆಗಳು ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಅಡಿ 29 ಕೆರೆಗಳನ್ನು ತುಂಬಲು ನೀರು ಹರಿಸಲಾಗುವುದು. ಹಾಗೂ ಮೂರನೆ ಹಂತದ ಏತನೀರಾವರಿ ಯೋಜನೆ ಅಡಿಯಲ್ಲಿ ಬಸವನ ಬಾಗೇವಾಡಿ, ಮುದ್ದೇಬಿಹಾಳ, ದೇವರಹಿಪ್ಪರಗಿ ಮತ್ತು ವಿಜಯಪುರ ತಾಲೂಕುಗಳ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದು ಹೇಳಿದರು.

ಈಗ ಹರಿಸುವ ನೀರನ್ನು ಕೇವಲ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಬೇಕು. ಈ ಯೋಜನೆಯಡಿ ಬರುವ ಎಲ್ಲ ಸಾರ್ವಜನಿಕರು, ರೈತಾಪಿ ವರ್ಗದವರು ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಬೇಸಿಗೆ ಇನ್ನೂ ಎರಡು ತಿಂಗಳು ಇರುವ ಹಿನ್ನೆಲೆಯಲ್ಲಿ ಈ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News