ಖಾಸಗಿ ಶಾಲೆಗಳು ಆನ್‍ಲೈನ್ ಬೋಧನೆಗೆ ಶುಲ್ಕ ಪಡೆಯುವಂತಿಲ್ಲ: ಶಿಕ್ಷಣ ಇಲಾಖೆ ಆದೇಶ
Update: 2020-04-18 22:20 IST
ಬೆಂಗಳೂರು, ಎ.18: ಖಾಸಗಿ ಶಾಲೆಗಳು ಆನ್‍ಲೈನ್ ಬೋಧನೆಯನ್ನು ನೆಪವಾಗಿ ಇಟ್ಟುಕೊಂಡು ವಿದ್ಯಾರ್ಥಿಗಳಿಂದ ಮತ್ತು ಪೋಷಕರಿಂದ ಶುಲ್ಕವನ್ನು ಪಡೆಯುವಂತಿಲ್ಲವೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ಶುಕ್ರವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ, ಪಾಠ ಪ್ರವಚನ ನಡೆಸಲು ಸರಕಾರದ ಯಾವುದೇ ಅಭ್ಯಂತರವಿಲ್ಲ. ಆದರೆ, ಅದು ಉಚಿತವಾಗಿರಬೇಕೆಂದು ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಗಳಿಗೆ ಸೂಚಿಸಿದೆ. ಈ ಬಗ್ಗೆ ಪೋಷಕರ ಮೇಲೆ ಯಾವುದೇ ಒತ್ತಡ ಹೇರುವಂತಿಲ್ಲವೆಂದು ತೀರ್ಮಾನಿಸಲಾಗಿದೆ.
2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡ ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಪಡೆಯುವುದನ್ನು ಹಾಗೂ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿ ಮಾಡುವುದನ್ನು ಸರಕಾರದ ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.