×
Ad

ಲಾಕ್‍ಡೌನ್: 1.3 ಲಕ್ಷ ಕರೆಗಳು ಸ್ವೀಕರಿಸಿದ ಪೊಲೀಸ್ ಸಹಾಯವಾಣಿ

Update: 2020-04-18 23:23 IST

ಬೆಂಗಳೂರು, ಎ.18: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಸಹಾಯವಾಣಿ ನಮ್ಮ-100ಕ್ಕೆ ಇದುವರೆಗೂ 1.03 ಲಕ್ಷಕ್ಕೂ ಅಧಿಕ ಕರೆಗಳು ಬಂದಿದ್ದು, ಈ ಪೈಕಿ ಕುಡುಕರ ಕರೆಗಳೇ ಅಧಿಕವಾಗಿವೆ.

ಸಾಮಾನ್ಯವಾಗಿ ಗಲಾಟೆ-ಗದ್ದಲ, ಅಪರಾಧವಾದಾಗ ಕಂಟ್ರೋಲ್‍ ರೂಂಗೆ ಕರೆ ಮಾಡುತ್ತಿದ್ದರು. ಆದರೆ, ಇದೀಗ ಕೊರೋನ ಸಂಬಂಧಿಸಿದ ಕರೆಗಳೇ ಅಧಿಕವಾಗುತ್ತಿವೆ. ಅದರಲ್ಲಿ ಕುಡುಕರು ಕರೆ ಮಾಡಿ ದಯವಿಟ್ಟು ನಮಗೆ ಮದ್ಯ ಕೊಡಿಸಿ, ಇಲ್ಲವಾದರೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ ಎಂದು ಕಂಟ್ರೋಲ್‍ ರೂಂ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಹೆಲ್ಪ್ ಲೈನ್ ದುರ್ಬಳಕೆ: ತುರ್ತು ಸೇವೆ ಒದಗಿಸುವ ಹೆಲ್ಪ್ ಲೈನ್‍ಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಕರೆ ಮಾಡಿ ಬಾರ್ ಯಾವಾಗ ಓಪನ್ ಆಗುತ್ತವೆ, ನೀವು ಯಾವಾಗ ಓಪನ್ ಮಾಡಿಸುತ್ತೀರಿ ಎಂದೆಲ್ಲಾ ಕೇಳುವವರ ಸಂಖ್ಯೆ ಅಧಿಕವಾಗುತ್ತಿದೆ. ಊಟದ ಬಳಿಕ ಬಾಳೆಹಣ್ಣು ತಿನ್ನಬೇಕು, ಹೀಗಾಗಿ, ಬಾಳೆಹಣ್ಣು ತಂದುಕೊಡಲು ಸಾಧ್ಯವಾ ಎಂದೆಲ್ಲಾ ಕೇಳುತ್ತಿದ್ದಾರೆ.

ಕೋವಿಡ್ 19 ದೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್‍ರೂಂಗೆ ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಕರೆಗಳು ಬರುತ್ತವೆ. ಸಾಮಾನ್ಯ ದಿನಗಳಲ್ಲಿ ಕಾನೂನು ಸುವ್ಯವಸ್ಥೆ, ರಸ್ತೆ ಅಪಘಾತ ಸೇರಿದಂತೆ ಕರೆ ಮಾಡುತ್ತಿದ್ದರು. ಇದೀಗ ಸಾರ್ವಜನಿಕರು ಕೊರೋನದಿಂದಾಗಿ ಆಗಿರುವ ಸಮಸ್ಯೆಗಳ ಬಗ್ಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಕೊರೋನ ಸಂಬಂಧಿತ ಕರೆಗಳ ಜತೆ ಅಪರಾಧಕ್ಕೂ ಸಂಬಂಧಿಸಿದ ಕರೆಗಳು ಬರುತ್ತಿವೆ.

714 ಮಂದಿ ಸೇವೆ: ಲಾಕ್‍ಡೌನ್ ಘೋಷಣೆಯಿಂದ ಹಿರಿಯ ನಾಗರಿಕರು ಆಸ್ಪತ್ರೆಗೆ ಹೋಗಲಾರದಂತಹ ಪರಿಸ್ಥಿತಿ ಕಂಡು ಆಯುಕ್ತ ಭಾಸ್ಕರ್ ರಾವ್ ಎ.4 ರಿಂದ ಹಿರಿಯ ನಾಗರಿಕರ ತುರ್ತು ವೈದ್ಯಕೀಯ ಸೇವೆ ಹೊಯ್ಸಳ ಸೇವೆ ಪ್ರಾರಂಭಿಸಿದ್ದರು. ಅದರಂತೆ ಇದುವರೆಗೂ 714 ಮಂದಿ ಪೊಲೀಸ್ ಸೇವೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News