ರವಿವಾರ ಉಪ್ಪಿನಂಗಡಿಯ ಮಹಿಳೆ ಸೇರಿ 6 ಮಂದಿಗೆ ಕೊರೋನ ಪಾಸಿಟಿವ್: ಇಬ್ಬರು ಮೃತ್ಯು
ಬೆಂಗಳೂರು, ಎ.18: ಬೆಂಗಳೂರಿನ 65 ವರ್ಷದ ಮಹಿಳೆ ಹಾಗೂ ದ.ಕ ಜಿಲ್ಲೆಯ ಬಂಟ್ವಾಳ ಕಸಬದ 50 ವರ್ಷದ ಮಹಿಳೆ ಸೇರಿ ಒಟ್ಟು ಇಬ್ಬರು ರವಿವಾರ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನದಿಂದ ಮೃತರಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಅಲ್ಲದೇ, ರವಿವಾರ ಮತ್ತೆ 6 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 390ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನಲ್ಲಿ ಶನಿವಾರ ಸಂಜೆ 5ರಿಂದ ರವಿವಾರ ಸಂಜೆ 5 ಗಂಟೆಯೊಳಗೆ ರಾಜ್ಯದಲ್ಲಿ 6 ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಲಾಗಿದೆ. ಅದರಲ್ಲಿ ದ.ಕ ಜಿಲ್ಲೆಯ ಉಪ್ಪಿನಂಗಡಿಯ 30 ವರ್ಷದ ಮಹಿಳೆ, ಮೈಸೂರಿನ ನಾಲ್ವರಲ್ಲಿ ಕೊರೋನ ದೃಢಪಟ್ಟಿದೆ. ಸೋಂಕು ದೃಢಪಟ್ಟ ದ.ಕ ಜಿಲ್ಲೆಯ ಬಂಟ್ವಾಳ ಕಸಬದ ಮಹಿಳೆ ಮೃತಪಟ್ಟಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಕೊರೋನ ಸೋಂಕಿಗೊಳದ ಒಟ್ಟು 390 ಮಂದಿಯ ಪೈಕಿ 100 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 16 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ದ.ಕ.ಜಿಲ್ಲೆಯಲ್ಲಿ ಮತ್ತೆರಡು ಕೊರೋನ ವೈರಸ್ ಪಾಸಿಟಿವ್
ದ.ಕ. ಜಿಲ್ಲಾಡಳಿತದ ಸತತ ಪರಿಶ್ರಮದಿಂದ ಕಳೆದ ಹಲವು ದಿನಗಳಿಂದ ನಿಯಂತ್ರಣದಲ್ಲಿದ್ದ ಕೊರೋನ ವೈರಸ್ ರೋಗವು ರವಿವಾರ ಮತ್ತೆ ನಿಯಂತ್ರಣ ತಪ್ಪಿದೆ. ರವಿವಾರ ಬಂದ ವರದಿಯಲ್ಲಿ ಎರಡು ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಆ ಪೈಕಿ ಬಂಟ್ವಾಳ ಮೂಲದ ಮಹಿಳೆ ಮೃತಪಟ್ಟಿದ್ದರೆ, ಉಪ್ಪಿನಂಗಡಿ ಮೂಲದ ಸುಮಾರು 30 ವರ್ಷ ಪ್ರಾಯದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ದ.ಕ.ಜಿಲ್ಲೆಯಲ್ಲಿ ಮಗು, ವೃದ್ಧೆ ಸಹಿತ 14 ಮಂದಿ ಸೋಂಕಿತರಿದ್ದರು. ಆ ಪೈಕಿ 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಶುಕ್ರವಾರ ದೃಢಗೊಂಡ ಉಪ್ಪಿನಂಗಡಿಯ 39ರ ಹರೆಯದ ವ್ಯಕ್ತಿಯು ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಶನಿವಾರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳದ ಮಹಿಳೆ ರವಿವಾರ ಬೆಳಗ್ಗೆ ಮೃತಪಟ್ಟಿದ್ದರೆ, ಇನ್ನೋರ್ವ ಮಹಿಳೆಗೆ ಸೋಂಕಿರುವುದು ರವಿವಾರ ದೃಢವಾಗಿದೆ.