×
Ad

‘ಚನ್ನರಾಯಪಟ್ಟಣಕ್ಕೆ ಹೋದವರನ್ನು ದಿಲ್ಲಿಗೆ ಹೋದವರು’ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಕನ್ನಡ ಮಾಧ್ಯಮಗಳು !

Update: 2020-04-19 19:15 IST

#ತಹಶೀಲ್ದಾರ್ ಹೆಸರಲ್ಲಿ ಸುಳ್ಳು ಸುದ್ದಿ ಪ್ರಕಟ

ಹಾಸನ, ಎ.18: ಕೊರೋನ ಹೆಸರಲ್ಲಿ ಸುಳ್ಳು ಸುದ್ದಿ ಹರಡಿ ಮತ್ತೊಮ್ಮೆ ಕನ್ನಡದ ಮಾಧ್ಯಮಗಳು ಸಿಕ್ಕಿಬಿದ್ದಿವೆ. ಈ ಬಾರಿ ಹಾಸನಕ್ಕೆ ಸಂಬಂಧಿಸಿ ಚಾನೆಲ್ ಗಳು ಮತ್ತು ಒಂದು ಪತ್ರಿಕೆ ಈ ಸುಳ್ಳನ್ನು ಹರಡಿತ್ತು.

‘ಹಾಸನದಿಂದ ದಿಲ್ಲಿಯ ತಬ್ಲೀಗಿ ಧಾರ್ಮಿಕ ಸಭೆಗೆ ಹೋಗಿದ್ದ ಮೂವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ’ ಎಂದು ಕನ್ನಡದ ಕೆಲ ಚಾನೆಲ್ ಗಳು ಮತ್ತು ದಿನ ಪತ್ರಿಕೆಯೊಂದು ವರದಿ ಬಿತ್ತರಿಸಿತ್ತು.

ದಿಲ್ಲಿಯ ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಹೋಗಿದ್ದ ಪಟ್ಟಣದ ಮೂವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ, 'ತಪಾಸಣೆ ಒಳಪಡದೆ ತಪ್ಪಿಸಿಕೊಂಡಿದ್ದಾರೆ' ಎಂದು ‘ದಿಗ್ವಿಜಯ’ ಚಾನೆಲ್ ವರದಿ ಪ್ರಕಟಿಸಿದೆ. ಜೊತೆಗೆ,  'ಹಾಸನಕ್ಕೆ ಅಂಟಿದ ದೆಹಲಿ ಜಮಾಅತ್ ನಂಟು', 'ತಪಾಸಣೆ ಮಾಡಿಸದೆ ಓಡಾಡುತ್ತಿದ್ದರು' ಎಂದೆಲ್ಲಾ ಸುಳ್ಳನ್ನು ಪ್ರಕಟಿಸಿತ್ತು.

ಅಲ್ಲದೇ, 'ವಿಜಯವಾಣಿ' ಪತ್ರಿಕೆಯು ದಿಲ್ಲಿ ತಬ್ಲೀಗಿ ಧಾರ್ಮಿಕ ಸಭೆಗೆ ಹೋದವರಿಗೆ ಕ್ವಾರಂಟೈನ್ ಎಂದು ಪ್ರಕಟಿಸಿತ್ತು. ಈ ಮಾಹಿತಿಯನ್ನು ತಹಶೀಲ್ದಾರ್ ಶಿರಿನ್ ತಾಜ್ ನೀಡಿದ್ದಾರೆ ಎಂದು ವರದಿ ಮಾಡಿತ್ತು. ‘ಪಟ್ಟಣದ ಮೂವರು ಫೆಬ್ರವರಿ 10ರಂದು ದಿಲ್ಲಿಗೆ ಹೋಗಿ ಮಾರ್ಚ್ 20ರಂದು ಕುಣಿಗಲ್ ಗೆ ಬಂದು ನಂತರ ಆಲೂರಿಗೆ ವಾಪಸಾಗಿದ್ದಾರೆ. ಅಲ್ಲದೆ, 20 ದಿನಗಳು ಕಳೆದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿಲ್ಲ’ ಎಂದು ಆರೋಪಿಸಲಾಗಿತ್ತು.  

ಇದೆಲ್ಲದರ ನಡುವೆ, ‘ಸುವರ್ಣ ನ್ಯೂಸ್’ ಚಾನೆಲ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಹಾಸನದ ಮೂಲದ ವ್ಯಕ್ತಿಗೆ ಪಾಸಿಟಿವ್’ ಎಂದು ಸುದ್ದಿ ಬಿತ್ತರಿಸಿತ್ತು. (ಹಾಸನದಲ್ಲಿ ಇದುವರೆಗೆ ಯಾವುದೇ ಕೊರೋನ ಪ್ರಕರಣ ದೃಢಪಟ್ಟಿಲ್ಲ )

ವಾಸ್ತವವೇನು?
ಈ ಮಾಧ್ಯಮಗಳು ಪ್ರಕಟಿಸಿದಂತೆ ಹಾಸನದ ಮೂವರು ವ್ಯಕ್ತಿಗಳು ದಿಲ್ಲಿಗೆ ಹೋಗಿಲ್ಲ. ಹಾಸನದ ಮೂವರು ಚನ್ನರಾಯಪಟ್ಟಣದಲ್ಲಿ ಫೆಬ್ರವರಿ 10ರಂದು ನಡೆದ ಹಾಸನ ಜಿಲ್ಲೆ ಮಟ್ಟದ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿ ನಂತರ 40 ದಿನಗಳ ಕಾಲ ವಿವಿಧೆಡೆ ಸಂಚರಿಸಿದ್ದರು. ಇವರು ಫೆಬ್ರವರಿ 10ರಿಂದ ಮಾರ್ಚ್ 20ರವರೆಗೆ ಕುಣಿಗಲ್ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸಿದ್ದು, ಕಳೆದ ಮಾರ್ಚ್ 20ರಂದು ಊರಿಗೆ ಮರಳಿದ್ದರು. ಅಂದರೆ ಮಾರ್ಚ್ 22ರ ಜನತಾ ಕರ್ಫ್ಯೂ ಮೊದಲೇ ಈ ಮೂವರು ಆಲೂರು ತಲುಪಿದ್ದರು.

ಊರಿಗೆ ತಲುಪಿದ ನಂತರ ಈ ಮೂವರನ್ನು ಎಪ್ರಿಲ್ 16ರಂದು ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸಿದ್ದರು. ತಪಾಸಣೆಯಲ್ಲಿ ಈ ಮೂವರ ವರದಿ ನೆಗೆಟಿವ್ ಬಂದಿತ್ತು.

ಸತ್ಯಾಂಶ ಹೀಗಿದ್ದರೂ ‘ದಿಗ್ವಿಜಯ’ ಮತ್ತು 'ಸುವರ್ಣ ನ್ಯೂಸ್' ಚಾನೆಲ್, 'ವಿಜಯವಾಣಿ' ಪತ್ರಿಕೆಯು ಎಪ್ರಿಲ್ 19ರಂದು ‘ದಿಲ್ಲಿಯ ತಬ್ಲೀಗ್ ಜಮಾಅತ್ ಧಾರ್ಮಿಕ ಸಭೆಗೆ ಹೋಗಿದ್ದರು ಮತ್ತು ಅವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ’ ಎಂಬ ಸುಳ್ಳನ್ನು ಪ್ರಕಟಿಸಿದೆ.

ಈ ಮೂವರನ್ನು ‘ವಾರ್ತಾ ಭಾರತಿ’ಯ ಪ್ರತಿನಿಧಿ ಸಂಪರ್ಕಿಸಿ ಮಾತನಾಡಿದ್ದು, "ನಾವು ಕೂಡಾ ಮನುಷ್ಯರೇ. ನಮಗೂ ಸಂಸಾರ, ಸಮಾಜ, ಬಂಧು-ಬಳಗವಿದೆ. ಜವಾಬ್ದಾರಿ ಸಹ ಇದೆ. ನಾವು ದಿಲ್ಲಿಗೆ ಹೋಗಿದ್ದರೆ ಸ್ವಯಂ ತಪಾಸಣೆಗೆ ಒಳಗಾಗುತ್ತಿದ್ದೆವು. ತಾಲೂಕು ಆಡಳಿತ ತಪಾಸಣೆಗೆ ಮಂದಾದಾಗ ಸಂಪೂರ್ಣವಾಗಿ ಸಹಕಾರ ನೀಡಿದ್ದೇವೆ. ತಬ್ಲೀಗ್ ಜಮಾತ್ ಹೆಸರಲ್ಲಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ತಹಶೀಲ್ದಾರ್ ಶೀರಿನ್ ತಾಜ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು, ‘ದಿಗ್ವಿಜಯ’ ಚಾನೆಲ್ ನಲ್ಲಿ ಬಂದಿರುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಜಿಲ್ಲಾಧಿಕಾರಿ ಮಾತ್ರವೇ ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಾರೆ. ನಾವು ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ಟಿವಿಯಲ್ಲಿ ಪ್ರಕಟಗೊಂಡ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News