ಕಲಬುರಗಿಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಜಾತ್ರೆ: ಹಲವರ ವಿರುದ್ಧ ಪ್ರಕರಣ ದಾಖಲು, 13 ಮಂದಿ ಬಂಧನ
ಕಲಬುರಗಿ, ಎ.19: ಲಾಕ್‍ಡೌನ್ ಉಲ್ಲಂಘಿಸಿ ಆಳಂದ ತಾಲೂಕಿನ ಭೂಸನೂರು ಗ್ರಾಮದಲ್ಲಿ ನಡೆದ ಜಾತ್ರೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಜನರನ್ನು ರವಿವಾರ ಪೋಲಿಸರು ಬಂಧಿಸಿದ್ದಾರೆ.
ಭೂಸನೂರು ಗ್ರಾಮದೇವರಾದ ಹನುಮಂತನ ದೇವಸ್ಥಾನದ ಮಖಂಡರು, ಗ್ರಾಮದ ಹಿರಿಯರ ನೇತೃತ್ವದಲ್ಲಿ ಎ.16ರಂದು ಬೆಳಗಿನ ಜಾವ 3ಕ್ಕೆ ರಥೋತ್ಸವ ನಡೆಸಲಾಗಿತ್ತು. ಜಾತ್ರೆಯ ವಿಡಿಯೊ ತುಣುಕುಗಳು ಎ.18ರಂದು ವೈರಲ್ ಆಗಿದ್ದವು. ಅದನ್ನು ಅನುಸರಿಸಿ, ಗ್ರಾಮಕ್ಕೆ ಭೇಟಿ ನೀಡಿದ ಪೋಲಿಸರು ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಯಡಾಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಲಾಕ್‍ಡೌನ್ ಮುಗಿಯುವವರೆಗೆ ಹಾಗೂ ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಜಾತ್ರೆ ನಡೆಸದಂತೆ ತಾಲೂಕು ಆಡಳಿತ ಸೂಚನೆ ನೀಡಿತ್ತು. ದೇವಸ್ಥಾನದವರು ಇದಕ್ಕೆ ಒಪ್ಪಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೂ ಪೋಲಿಸರ ಕಣ್ಣು ತಪ್ಪಿಸಿ, ಬೆಳಗಿನ ಜಾವ ಜಾತ್ರೆ ನಡೆಸಲಾಗಿದೆ. ಇದರಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಲಾಕ್‍ಡೌನ್ ಆದ ಬಳಿಕ ನಿಯಮವನ್ನು ಉಲ್ಲಂಘಿಸಿ ರಾವೂರು ಹಾಗೂ ಭೂಸನೂರು ಗ್ರಾಮಗಳಲ್ಲಿ ಜಾತ್ರೆಯನ್ನು ಮಾಡಲಾಗಿತ್ತು. ಹೀಗಾಗಿ, ಈ ಎರಡು ಗ್ರಾಮಗಳಿಗೆ ಯಾರೂ ಬರದಂತೆ ಹಾಗೂ ಹೊರಕ್ಕೆ ಹೋಗದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.