×
Ad

ಪಾದರಾಯನಪುರ ಘಟನೆಗೆ ಇಡೀ ಸಮುದಾಯವನ್ನು ಟೀಕಿಸುವುದು ಸರಿಯಲ್ಲ: ಯು.ಟಿ.ಖಾದರ್

Update: 2020-04-20 19:19 IST

ಮೈಸೂರು,ಎ.20: ಬೆಂಗಳೂರಿನ ಪಾದರಾಯನಪುರದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ಟೀಕಿಸುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಟಾಸ್ಕ್ ಫೋರ್ಸ್ ಕೋವಿಡ್-19 ಮೈಸೂರು ವಿಭಾಗೀಯ 8 ಜಿಲ್ಲೆಗಳ ಕಾರ್ಯಪಡೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 

ಪಾದರಾಯನಪುರದಲ್ಲಿ ಯಾರೋ ಕೆಲವು ಕಿಡಿಗೇಡಿಗಳು ತಪ್ಪು ಮಾಡಿದ್ದಾರೆ. ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲಿ. ಅದು ಬಿಟ್ಟು ಇಡೀ ಸಮುದಾಯದ ಮುಖಂಡರುಗಳನ್ನು ಟೀಕಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ಇಂತಹ ತಪ್ಪುಗಳನ್ನು ಮಾಡಿದ ಕಿಡಿಗೇಡಿಗಳಿಗೆ ಶಿಕ್ಷೆಗೊಳಪಡಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಆಗದ ಬಿಜೆಪಿ ಸರ್ಕಾರ ಸಮುದಾಯದ ಮುಖಂಡರುಗಳು ಬುದ್ಧಿ ಹೇಳಿ ಎಂದು ಹೇಳುತ್ತಿದೆ. ತಂದೆ, ತಾಯಿಯ ಮಾತುಗಳನ್ನೇ ಕೇಳದವರು ಸಮುದಾಯದ ಮುಖಂಡರುಗಳ ಮಾತುಗಳನ್ನು ಕೇಳಲಿದ್ದಾರೆಯೆ? ಇಂತಹ ಕಿಡಿಗೇಡಿಗಳನ್ನು ಮಟ್ಟಹಾಕಲು ಸಾಧ್ಯವಾಗದಿದ್ದ ಮೇಲೆ ಇವರೇಕೆ ಅಧಿಕಾರಲ್ಲಿರಬೇಕು ಎಂದು ಕಿಡಿಕಾರಿದರು.

ಕೊರೋನ ತಡೆಗಟ್ಟುವಲ್ಲಿ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೊಲೀಸರು ಹಗಲಿರುಳು ಶಕ್ತಿಮೀರಿ ಪ್ರಯತ್ನಪಡುತ್ತಿದ್ದಾರೆ. ಅವರಿಗೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಎಲ್ಲರೂ ಸಹಕಾರ ನೀಡಿ ಕೊರೋನ ತಡೆಗಟ್ಟುವ ಕಡೆ ಗಮನಹರಿಸಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News