ಚಿಕ್ಕಮಗಳೂರು: ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭಕ್ಕೆ ಸಚಿವ ಸಂಪುಟ ಅಸ್ತು; ಸಚಿವ ಸಿ.ಟಿ.ರವಿ
ಚಿಕ್ಕಮಗಳೂರು, ಎ.20: ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ 2019ರ ಅಕ್ಟೋಬರ್ ನಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಹೊಸ ವೈದ್ಯಕೀಯ ಕಾಲೇಜನ್ನು 438.75 ಕೋ. ರೂ. ವೆಚ್ಚದಲ್ಲಿ ಆರಂಭಿಸಲು ರಾಜ್ಯ ಸರಕಾರದ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಬೇಕೆನ್ನುವುದು ಜಿಲ್ಲೆಯ ಜನರ ಅನೇಕ ವರ್ಷಗಳ ಬೇಡಿಕೆಯಾಗಿದ್ದು, ಕೇಂದ್ರ ಸರಕಾರ 2019ರ ಅಕ್ಟೋಬರ್‍ನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿತ್ತು.
ಹೊಸ ವೈದ್ಯಕೀಯ ಕಾಲೇಜಿನ ನಿಮಾಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ,ಬಾಲಕಿಯರ ವಸತಿ ನಿಲಯ, ಬೋಧಕ ಬೋಧಕೇತರ ಸಿಬ್ಬಂದಿಯ ವಸತಿ ನಿಲಯ ಹಾಗೂ ಇತರ ಕಟ್ಟಡಗಳ ಕಾಮಗಾರಿಗೆ ಅಂದಾಜು ಮೊತ್ತ 325 ಕೋ. ರೂ. ಹಾಗೂ ವೈದ್ಯಕೀಯ ಉಪಕರಣ, ಪೀಠೋಪಕರಣ, ಮವೀಕರಣ ಕಾಮಗಾರಿಗಳಿಗೆ 71 ಕೋ. ರೂ. ಹಾಗೂ ಇತರ ಆವಶ್ಯಕ ವೆಚ್ಚಗಳಿಗೆ 42.5 ಕೋ. ರೂ. ಸೇರಿದಂತೆ ಒಟ್ಟಾರೆ 438.75 ಕೋ. ರೂ. ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೆಸರಿನಲ್ಲಿ ಕಾಲೇಜು ಆರಂಭಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಸಂಪುಟವು 150 ಪ್ರವೇಶ ಸಂಖ್ಯೆಯ ಮಿತಿಯುಳ್ಳ ಹೊಸ ವೈದ್ಯಕೀಯ ಕಾಲೇಜನ್ನು ಸ್ವಾಯತ್ತಾ ಸಂಸ್ಥೆಯ ಸ್ಥಾನಮಾನದೊಂದಿಗೆ 2021-22 ನೇ ಸಾಲಿನಲ್ಲಿ ಆರಂಭಿಸಲು ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.