ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಗೆ ಬೆದರಿಕೆ ಆರೋಪ: ಮೂವರ ಬಂಧನ

Update: 2020-04-21 13:50 GMT

ಮೈಸೂರು,ಎ.21: ಕೊರೋನ ಸೋಂಕಿನ ಲಕ್ಷಣಗಳ ಸರ್ವೆ ಮಾಡುವ ವೇಳೆ ಆಶಾ ಕಾರ್ಯಕರ್ತೆಯೋರ್ವರ ಮೇಲೆ ಕೆಲವು ಕಿಡಿಗೇಡಿಗಳು ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದಾರೆನ್ನಲಾದ ಘಟನೆ ನರಸಿಂಹರಾಜ ಕ್ಷೇತ್ರದ ಅಲೀಂ ನಗರದಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯ್ಯ ಫಿರ್ದೋಸ್ ಅವರು ಮಂಗಳವಾರ ಬೆಳಿಗ್ಗೆ ಕೊರೋನ ಸೋಂಕಿನ ಲಕ್ಷಣಗಳ ಸರ್ವೇ ಮಾಡುವ ವೇಳೆ ಗುಂಪಾಗಿ ನಿಂತಿದ್ದ ಹುಡುಗರನ್ನು ಸುರಕ್ಷಿತ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕೆಲವು ಕಿಡಿಗೇಡಿಗಳು ಅವರ ಮೇಲೆ ಹಲ್ಲೆಗೆ ಯತ್ನಿಸಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾದ ಪೊಲೀಸರು ಮೆಹಬೂಬ್, ಖಲೀಲ್ ಮತ್ತು ಜೀಸನ್ ಎಂಬವರನ್ನು ಬಂಧಿಸಿದ್ದಾರೆ. 

ಆಶಾ ಕಾರ್ಯರ್ತೆ ಭೇಟಿ ಮಾಡಿ ಸಾಂತ್ವಾನ ಹೇಳಿದ ಸಚಿವರು:  ಆಶಾ ಕಾರ್ಯಕರ್ತೆ ಸುಮಯ್ಯ ಫಿರ್ದೋಸ್ ಅವರನ್ನು ಮಂಗಳವಾರ ಸಚಿವರುಗಳಾದ ಡಾ.ಕೆ.ಸುಧಾಕರ್ ಮತ್ತು ಎಸ್.ಟಿ.ಸೋಮಶೇಖರ್ ಭೇಟಿ ಧೈರ್ಯ ತುಂಬಿದರು.

ಅಲೀಂ ನಗರದ ಸುಮಯ್ಯ ಫಿರ್ದೋಸ್ ಅವರ ಮೆನೆಗೆ ಭೇಟಿ ನೀಡಿದ ಉಭಯ ಸಚಿವರುಗಳು, ಅವರಿಗೆ ಧೈರ್ಯ ತುಂಬಿ ನಿಮ್ಮ ಪರವಾಗಿ ನಾವಿದ್ದು, ನೀವು ಯಾವುದಕ್ಕೂ ಹೆದರದೆ ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News