ಮಾಧ್ಯಮ ಪ್ರತಿನಿಧಿಗಳಿಗೆ 'ಕೊರೋನ' ವಿಶೇಷ ತಪಾಸಣಾ ಶಿಬಿರ ನಡೆಸಲು ಸಿಎಂ ಸೂಚನೆ
ಬೆಂಗಳೂರು, ಎ. 21: 'ಕರ್ತವ್ಯದ ಗಡಿಬಿಡಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ತಪ್ಪಬಾರದೆಂಬುದು ನಮ್ಮ ಕಾಳಜಿ. ನೀವೂ ಆರೋಗ್ಯ ತಪಾಸಣೆಗೊಳಗಾಗಿ ಎಚ್ಚರ ವಹಿಸಲು ವಿನಂತಿಸುತ್ತೇನೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪತ್ರ ಬರೆದು, ಸರಣಿ ಟ್ವೀಟ್ ಮಾಡಿರುವ ಅವರು, 'ಮಾಧ್ಯಮ ಬಂಧುಗಳೇ ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರಂತೆ ತಾವೂ ಜೀವದ ಹಂಗು ತೊರೆದು ದಿನದ 24 ಗಂಟೆಗಳಲ್ಲೂ ಜಾಗೃತರಾಗಿ ಜನತೆ ಹಾಗೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೀರಿ' ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಕೊರೋನ ವೈರಸ್ ಸೋಂಕು ತಪಾಸಣಾ ಶಿಬಿರದಲ್ಲಿ 171 ಮಂದಿ ಪತ್ರಕರ್ತರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದು, ಆ ಪೈಕಿ 53 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ತಪಾಸಣಾ ಶಿಬಿರ ಏರ್ಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.