ತಬ್ಲೀಗಿಗಳಿಂದ ಕೊರೋನ ಹರಡುವ ಸಂಚು ನಡೆದಿದೆ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

Update: 2020-04-21 17:10 GMT

ಚಿಕ್ಕಮಗಳೂರು, ಎ.21: ದಿಲ್ಲಿ ನಿಝಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರು ಸರಕಾರದೊಂದಿಗೆ ಸ್ಪಂದಿಸದೇ ಕೊರೋನವನ್ನು ಉಳಿದವರಿಗೂ ಹಬ್ಬಿಸಬೇಕೆಂದು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು, ಮಂಡ್ಯ, ಗದಗ, ಬೆಳಗಾವಿಯಲ್ಲಿ ತಬ್ಲೀಗಿ ಜಮಾತ್ ಗೆ ಹೋಗಿ ಬಂದವರು ಇದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 70 ಜನರು ತಬ್ಲೀಗಿ ಜಮಾತ್ ಗೆ ಹೋದವರು ಸಿಕ್ಕಿದ್ದಾರೆ. ಇನ್ನೂ ಪತ್ತೆಯಾಗದವರು ಸರ್ಕಾರದೊಂದಿಗೆ ಸ್ಪಂದಿಸುತ್ತಿಲ್ಲ. ತಬ್ಲೀಗಿ ಜಮಾತ್ನಲ್ಲಿ ಭಾಗವಹಿಸಿ ಬಂದವರು ನಮ್ಮದೇಶದವರು ಅಲ್ಲವೇನೋ ಎನ್ನುವಂತೆ ನಡೆದುಕೊಳ್ಳುತ್ತಿದ್ದು, ಕೊರೊನ ಸೋಂಕು ಉಳಿದವರಿಗೂ ಹಬ್ಬಿಸಬೇಕು ಎನ್ನುವ ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದು, ಇದು ಜಿಹಾದಿ, ಭಯೋತ್ಪಾದಕರ ಮುಂದುವರಿದ ಭಾಗ ಎಂದು ಕಿಡಿಕಾರಿದರು. 

ತಬ್ಲೀಗಿ ಜಮಾತ್ನಲ್ಲಿ ಭಾಗವಹಿಸಿ ಬಂದ ಅನೇಕರು ಕ್ವಾರಂಟೈನ್‍ಗೆ ಬಂದಿಲ್ಲ, ಆಸ್ಪತ್ರೆಗೂ ಹೋಗಿಲ್ಲ, ಪೊಲೀಸರಿಗೂ ಮಾಹಿತಿ ನೀಡಿಲ್ಲ. ಕೊರೊನ ಸೋಂಕಿನಿಂದ ಆಗುವ ತೊಂದರೆಯ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ ಸರ್ಕಾರ ಅವರನ್ನೆಲ್ಲ ಕ್ವಾರಂಟೈನ್‍ನಲ್ಲಿ ಇಡಬೇಕು. ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಗಳ ಮೇಲೆ ಅನುಚಿತವಾಗಿ ನಡೆದುಕೊಳ್ಳುತ್ತಾರೋ ಅವರ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News